ಬೆಂಗಳೂರು: ಕೊರೊನಾ ಎರಡನೇ ಅಲೆ ಅಬ್ಬರದ ನಡುವೆ ನಕಲಿ ವೈದ್ಯರು, ರೆಮ್ ಡಿಸಿವರ್ ಇಂಜಕ್ಷನ್ ಕಾಳದಂಧೆಕೋರರ ಹಾವಳಿ ಹೆಚ್ಚುತ್ತಿದೆ. ಕೊರೊನಾ ಸೋಂಕಿಗೆ ಸಂಜೀವಿನಿ ಎಂದು ಹೇಳಲಾಗುತ್ತಿರುವ ರೆಮ್ ಡಿಸಿವಿರ್ ಔಷಧ ಎಂದು ಬೇರೊಂದು ಔಷಧ ನೀಡಿ ವಂಚಿಸುತ್ತಿದ್ದ ವೈದ್ಯರೊಬ್ಬರನ್ನು ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವೈದ್ಯನನ್ನು ಡಾ.ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ರೆಮ್ ಡಿಸಿವಿರ್ ಬದಲಿಗೆ ಬೇರೊಂದು ಔಷಧವನ್ನು ರೆಮ್ ಡಿಸಿವಿರ್ ಬಾಕ್ಸ್ ನಲ್ಲಿಟ್ಟು ಸೀಲ್ ಮಾಡಿ, ಒಂದು ಇಂಜಕ್ಷನ್ ಗೆ 11 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕೋವಿಡ್ ಆಸ್ಪತ್ರೆಗಳಿಗೆ ವಿಸಿಟಿಂಗ್ ಡಾಕ್ಟರ್ ಆಗಿ ಭೇಟಿ ನೀಡುತ್ತಿದ್ದ ವೇಳೆ ಕೊರೊನಾ ಸೋಂಕಿತರಿಗೆ ನೀಡುತ್ತಿದ್ದ ರೆಮ್ ಡಿಸಿವಿರ್ ಇಂಜಕ್ಷನ್ ಕದ್ದು, ತನ್ನ ಕ್ಲಿನಿಕ್ ಗೆ ತೆಗೆದುಕೊಂಡು ಹೋಗಿ ಬೇರೊಂದು ಆಂಟಿಬಯೋಟಿಕ್ ಔಷಧವಿಟ್ಟು ರೆಮ್ ಡಿಸಿವಿರ್ ಎಂದು ಮಾರಾಟ ಮಾಡುತ್ತಿದ್ದ. ಇದೀಗ ವೈದ್ಯನನ್ನು ಬಂಧಿಸಿರುವ ಪೊಲೀಸರು 8 ನಕಲಿ ರೆಮ್ ಡಿಸಿವಿರ್ ವಶಕ್ಕೆ ಪಡೆದಿದ್ದಾರೆ.