ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ 15 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆಯಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಅಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಮತ್ತೆ ಎರಡು ವಾರಗಳ ಲಾಕ್ ಡೌನ್ ಅಗತ್ಯವಿದೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಮೇ 24ರ ಬಳಿಕ ಏಕಾಏಕಿ ಲಾಕ್ ಡೌನ್ ಓಪನ್ ಮಾಡುವುದರಿಂದ ನಗರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಈಗಿರುವ ಲಾಕ್ ಡೌನ್ ನಿಂದ ಹಳ್ಳಿಗಳಿಗೆ ತೆರಳಿರುವ ಜನರು ನಗರಕ್ಕೆ ವಾಪಸ್ ಆಗುತ್ತಾರೆ. ಮಾತ್ರವಲ್ಲ ಜನರ ಓಡಾಟವೂ ಆರಂಭವಾಗುವುದರಿಂದ ರಾಜ್ಯದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಹೆಚ್ಚಲಿದ್ದು, ಅಪಾಯ ಎದುರಾಗಲಿದೆ. ಪಾಸಿಟಿವ್ ಕೇಸ್ ಕಡಿಮೆಯಾಗುವ ನಿಟ್ಟಿನಲ್ಲಿ ಇನ್ನೂ 15 ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡುವುದು ಒಳಿತು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಸಲಹೆಯನ್ನು ಇಂದು ಸಂಜೆ ಸಿಎಂ ಜೊತೆ ನಡೆಯಲಿರುವ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಸಿಎಸ್ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆ ಬಹುತೇಕ ಖಚಿತ ಎನ್ನಲಾಗಿದೆ.