ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಶಾಲೆಗಳಿಗೆ 2021-2022ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿದೆ. ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಪ್ರೌಢ ಶಿಕ್ಷಣ ಸಚಿವ ದಿನೇಶ್ ಶರ್ಮಾ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.
ಕೋವಿಡ್‌ನಿಂದಾಗಿ ಅನೇಕ ಕುಟುಂಬಗಳು ಆರ್ಥಿಕವಾಗಿ ತೊಂದರೆ ಅನುಭವಿಸಿವೆ ಎಂದು ದಿನೇಶ್ ಶರ್ಮಾ ಹೇಳಿದ್ದಾರೆ. ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ಮಕ್ಕಳಿಗೆ ಆನ್ಲೈನ್ ತರಗತಿ ನಡೆಯುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಯಾವುದೇ ಹೆಚ್ಚುವರಿ ಹೊರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಸರ್ಕಾರ ಹೇಳಿದೆ. ಹಾಗೆಯೇ ಶಿಕ್ಷಕರು ಮತ್ತು ಶಾಲೆಗಳಲ್ಲಿ ಕೆಲಸ ಮಾಡುವ ಇತರ ಉದ್ಯೋಗಿಗಳಿಗೆ ನಿಯಮಿತವಾಗಿ ವೇತನ ಸಿಕ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ ಎಂದವರು ಹೇಳಿದ್ದಾರೆ.
2019-2020ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬಂದಿರುವ ಶುಲ್ಕವನ್ನೇ ಈ ಬಾರಿಯೂ ವಿಧಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ಶುಲ್ಕ ಏರಿಸಿ, ಪಾಲಕರಿಂದ ಶುಲ್ಕ ಪಡೆದಿದ್ದರೆ ಅದನ್ನು ಮುಂದಿನ ತಿಂಗಳ ಶುಲ್ಕಕ್ಕೆ ಸರಿ ಹೊಂದಿಸಬೇಕೆಂದು ಸರ್ಕಾರ ಹೇಳಿದೆ. ಶಾಲೆ ಮುಚ್ಚಿರುವ ಅವಧಿಯಲ್ಲಿ ಸಾರಿಗೆ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಸರ್ಕಾರ ಹೇಳಿದೆ.