ಬೆಂಗಳೂರು: ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ರಾಜ್ಯ ಸರ್ಕಾರ ನಿರಾಕರಿಸಿದ್ದು, ಸರ್ಕಾರದ ಕ್ರಮಕ್ಕೆ ಕಿಡಿಕಾರಿರುವ ಸಿದ್ದರಾಮಯ್ಯ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇಂತಹ ಕ್ರಮ ಅನುಸರಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಸರ್ಕಾರ ನಿರಾಕರಿಸಿದೆ. ಪತ್ರದ ಮೂಲಕ ಮಾಹಿತಿ ಪಡೆಯಬಹುದು ಎಂದು ಸೂಚಿಸಿದೆ. ಇದು ಬಿಜೆಪಿ ನಾಯಕರ ಜನವಿರೋಧಿ ನೀತಿಯನ್ನು ತೋರುತ್ತದೆ. ಇವರ ಹುಳುಕು ಮುಚ್ಚಿಕೊಳ್ಳಲು ನಮಗೆ ಅಧಿಕಾರಿಗಳ ಜೊತೆ ಸಭೆ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಡಿಸಿಗಳಿಗೆ ನಿರ್ದೇಶನ ನೀಡಲು ಸಭೆ ಕರೆದಿರಲಿಲ್ಲ. ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ? ಅವರ ಕಾರ್ಯವೈಖರಿಗಳನ್ನು ಪರಿಶೀಲಿಸುವ ಉದ್ದೇಶದಿಂದ ಸಭೆ ಕರೆದಿದ್ದೆ. ಡಿಸಿಗಳಿಗೆ ಆದೇಶ ನೀಡುವ ಅಧಿಕಾರ ನನಗಿಲ್ಲ ಎಂಬ ಅರಿವು ನನಗಿದೆ. ಆದರೆ ಇವರ ತಪ್ಪನ್ನು ಮುಚ್ಚಿಕೊಳ್ಳಲು ನಮಗೆ ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ. ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆಯೇ ನಂಬಿಕೆ ಇಲ್ಲ ಎಂದು ಗುಡುಗಿದ್ದಾರೆ.