ಬೆಂಗಳೂರು: ಕೋವಿಡ್ ಲಸಿಕೆ ವಿಚಾರದಲ್ಲಿನ ಕಾಂಗ್ರೆಸ್‌ನ ಆತ್ಮವಂಚನೆಯನ್ನು ಪ್ರಸ್ತಾಪಿಸಿದ್ದಕ್ಕೆ ನಾನು ಸ್ವಯಂ ಗೋಲು ಹೊಡೆದುಕೊಂಡಿರುವುದಾಗಿ ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಲಸಿಕೆ ವಿಚಾರದಲ್ಲಿ ರಾಷ್ಟ್ರದ ಎದುರು ಬೆತ್ತಲಾಗಿ, ನಿಂತಿರುವುದು ಕಾಂಗ್ರೆಸ್. ಈ ವಿಚಾರದಲ್ಲಿ ನನ್ನನ್ನು ಟೀಕಿಸಲು ಬಂದು ನೀವು ಹಿಟ್ ವಿಕೆಟ್ ಆಗಿದ್ದೀರಿ ಎಂದು ಕಿಡಿಕಾರಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ರಾಜಕೀಯ ಸಮರ ಕೋವಿಡ್ ಲಸಿಕೆ ವಿಚಾರದಲ್ಲೂ ಮುಂದುವರೆದಿದ್ದು, ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ಹೆಚ್.ಡಿ.ಕೆ. ವಾಗ್ದಾಳಿ ನಡೆಸಿದ್ದಾರೆ. ನಾನು ದೇವೇಗೌಡರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಹೇಳಿದ ಸಿದ್ದರಾಮಯ್ಯನವರೇ ನಾನೂ ಸೇರಿದಂತೆ ಪಕ್ಷ ದೇವೇಗೌಡರ ಸಲಹೆಯಂತೆ ನಡೆದುಕೊಂಡಿದೆ. ಆದರೆ ತಾವು ಗೌಡರ ಸಲಹೆಯಂತೆ ನಡೆದುಕೊಂಡಿದ್ದೀರೇ? ಎಂದು ಪ್ರಶ್ನಿಸಿದ್ದಾರೆ.
1,500 ಜನರಲ್ಲಿ ಬ್ಲಾಕ್ ಫಂಗಸ್; ಕೊರೊನಾಘಾತದ ಬೆನ್ನಲ್ಲೇ ‘ಮಹಾ’ ಸರ್ಕಾರಕ್ಕೆ ಮತ್ತೊಂದು ಶಾಕ್
ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಹಾಕುವಂತೆ ಸೋನಿಯಾ ಗಾಂಧಿ ಅವರ ಜೊತೆಗೂಡಿ ಎಚ್.ಡಿ. ದೇವೇಗೌಡರು ಪ್ರಧಾನಿಗೆ ಪತ್ರ ಬರೆದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದೇಶದ ಹಲವು ವಿರೋಧಪಕ್ಷಗಳ ನಾಯಕರ ಜೊತೆಗೂಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರೇ ಹೊರತು, ಸೋನಿಯಾ ಗಾಂಧಿ ಅವರ ಜೊತೆಗೂಡಿ ಪತ್ರ ಬರೆಯಲಿಲ್ಲ ನೆನಪಿರಲಿ. ಅಸಮರ್ಪಕ ಲಸಿಕೆ ಅಭಿಯಾನ ವಿರುದ್ಧ ನಮ್ಮದೂ ಆಕ್ಷೇಪಣೆಗಳಿವೆ. ಆದರೆ, ಲಸಿಕೆ ವಿರುದ್ಧ ನಮ್ಮ ನಿಲುವು ಇಲ್ಲ. ಕಾಂಗ್ರೆಸ್ ನಾಯಕರು ಲಸಿಕೆ ವಿರುದ್ಧವೇ ಮಾತನಾಡಿದರು. ಈಗ ಲಸಿಕೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಹೇಳಿದ ಮಾತ್ರಕ್ಕೆ ಜನ ಲಸಿಕೆಯಿಂದ ವಿಮುಖರಾಗಿಲ್ಲ. ಜನ ಕಾಂಗ್ರೆಸ್ ಮಾತು ಕೇಳುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರಿಗೆ ಬೇಡ ಎಂದು ಕಿಡಿಕಾರಿದ್ದಾರೆ.
ಲಸಿಕೆಗಾಗಿ 100 ಕೋಟಿ ಕೊಟ್ಟಿದ್ದಾಗಿ ಕಾಂಗ್ರೆಸ್ ಹೇಳುತ್ತಿದೆ. ಇದೇನು ಸಿದ್ದರಾಮಯ್ಯನವರ ಮನೆ ಗಂಟೇ? ಕಾಂಗ್ರೆಸ್ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ನಿಧಿಯಲ್ಲವೇ? ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸರ್ಕಾರಕ್ಕೇ ನೀಡಿರುವುದಾಗಿ ಹೇಳಬೇಕಿದ್ದ ಕಾಂಗ್ರೆಸ್, ಲಸಿಕೆಗಾಗಿ ಕೈಯಿಂದ 100 ಕೋಟಿ ಕೊಟ್ಟಂತೆ ಹೇಳಿದೆ. ಇದೊಂದು ವಂಚಕ ನಡೆ. ಸೋಂಕು ಹೆಚ್ಚುತ್ತಿದ್ದರೂ, ಲಾಕ್‌ಡೌನ್ ಜಾರಿಯಲ್ಲಿ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಬೀದಿಗೆ ಬಿದ್ದಿದ್ದಾರೆ. ಜನರಿಗೆ ನೆರವಾಗುವುದು ಇವರ ಉದ್ದೇಶವಲ್ಲ. ರಾಜಕೀಯ ಮೈಲೇಜ್ ಪಡೆಯುವುದು ಇವರ ಉದ್ದೇಶ. ಜೊತೆಗೆ ಸಿಎಂ ಆಗುವ ಕನಸುಗಳು. ಶಾಂತಿ ಕಾಲದಲ್ಲಿ ಕಾಂಗ್ರೆಸ್ ಕಲಹಕ್ಕೆ ಇಳಿದು ಲಾಭ ಪಡೆಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.