ಕೊರೊನಾ ವೈರಸ್ ಸೋಂಕು ಮುಖ್ಯವಾಗಿ ಲಾಲಾರಸ ಮತ್ತು ಮೂಗಿನ ಮೂಲಕ ಹರಡುತ್ತದೆ ಎನ್ನಲಾಗಿತ್ತು. ಸೋಂಕಿತ ರೋಗಿಯ ಲಾಲಾರಸ ಅಥವಾ ಮೂಗಿನಿಂದ ಹೊರಬಿದ್ದ ವೈರಸ್ ಕಣಗಳು 2 ಮೀಟರ್ ವರೆಗೆ ಹರಡುತ್ತವೆ ಎನ್ನಲಾಗಿತ್ತು. ಆದ್ರೀಗ ಕೊರೊನಾ ವೈರಸ್ ನ ಏರೋಸೋಲ್ಸ್ ಗಳು ಗಾಳಿಯಲ್ಲಿ 10 ಮೀಟರ್ ವರೆಗೆ ಕ್ರಮಿಸಬಲ್ಲವು ಎಂಬ ಸಂಗತಿ ಹೊರಬಿದ್ದಿದೆ. ಇದೇ ಕಾರಣಕ್ಕೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸರ್ಕಾರ, ಈಜಿ ಟು ಫಾಲೋ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಕೊರೊನಾದಿಂದ ರಕ್ಷಣೆ ಪಡೆಯಲು ಸುರಕ್ಷತಾ ನಿಯಮ ಪಾಲನೆ ಮಾಡುವುದು ಅಗತ್ಯ. ಡಬಲ್ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಹಾಗೂ ಉತ್ತಮ ಗಾಳಿ ಅಗತ್ಯವೆಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಹೇಳಿದ್ದಾರೆ. ಭಾರತದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಸುಲಭ ಮಾರ್ಗಗಳನ್ನು ಪಾಲಿಸಬೇಕೆಂದು ಅವರು ಹೇಳಿದ್ದಾರೆ.
ರೋಗಿಯಿಂದ ಹೊರ ಬರುವ ವೈರಸ್ ಕಣಗಳು ವಾತಾವರಣದ ಮೇಲ್ಮೈನಲ್ಲಿರುತ್ತದೆ. ಇದು ತುಂಬಾ ಸಮಯ ಬದುಕಬಲ್ಲದು. ಬಾಗಿಲಿನ ಹ್ಯಾಂಡಲ್‌ಗಳು, ಸ್ವಿಚ್‌ಬೋರ್ಡ್‌ಗಳು, ಟೇಬಲ್-ಚೇರ್‌ಗಳು, ಮಹಡಿಗಳು ಮುಂತಾದ ಹೆಚ್ಚು ಸಂಪರ್ಕಕ್ಕೆ ಬರುವ ಮೇಲ್ಮೈಗಳನ್ನು ಸೋಂಕು ರಹಿತವಾಗಿರಿಸಿಕೊಳ್ಳಬೇಕು. ಇವುಗಳನ್ನು ಅನಗತ್ಯವಾಗಿ ಬಳಸಬಾರದು. ಸ್ಯಾನಿಟೈಜರ್ ಬಳಕೆ ಮಾಡಬೇಕು.
ಜನರು ಡಬಲ್ ಮಾಸ್ಕ್ ಧರಿಸುವುದು ಅಗತ್ಯವೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇಲ್ಲವೆ ಎನ್ 95 ಮಾಸ್ಕ್ ಧರಿಸಬೇಕು. ಡಬಲ್ ಮಾಸ್ಕ್ ಧರಿಸುವವರು ಸರ್ಜಿಕಲ್ ಮಾಸ್ಕ್ ಮೇಲೆ ಒಳ್ಳೆ ಬಿಗಿಯಾದ ಮಾಸ್ಕ್ ಧರಿಸಬೇಕು. ಸರ್ಜಿಕಲ್ ಮಾಸ್ಕ್ ಇಲ್ಲದವರು ಎರಡು ಸಾಮಾನ್ಯ ಮಾಸ್ಕ್ ಗಳನ್ನು ಧರಿಸಬೇಕು.
ಒಬ್ಬರಿಂದ ಒಬ್ಬರಿಗೆ ಸೋಂಕು ಕಡಿಮೆ ಗಾಳಿಯಿರುವ ಪ್ರದೇಶದಲ್ಲಿ ಹೆಚ್ಚಾಗಿ ಹರಡುತ್ತದೆ. ಹಾಗಾಗಿ ಹೆಚ್ಚು ಗಾಳಿಯಾಡುವ ಪ್ರದೇಶದಲ್ಲಿ ಹೆಚ್ಚು ಸಮಯ ಕಳೆಯಬೇಕು. ಕಿಟಕಿ-ಬಾಗಿಲುಗಳನ್ನು ಸದಾ ತೆರೆದಿಡಬೇಕು. ಕಚೇರಿಗಳು, ಸಭಾಂಗಣಗಳು, ಶಾಪಿಂಗ್ ಮಾಲ್‌ಗಳು ಇತ್ಯಾದಿಗಳಲ್ಲಿ ಫ್ಯಾನ್ ವ್ಯವಸ್ಥೆ ಮತ್ತು ವೆಂಟಿಲೇಟರ್‌ಗಳ ಬಳಕೆ ಮಾಡಬೇಕು.