ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚುರುಕುಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಲಾಕ್ಡೌನ್ ಮುಗಿದ ಕೂಡಲೇ ಶಿಕ್ಷಕರ ವರ್ಗಾವಣೆ ಮಾಡಲಾಗುವುದು.
6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಆದೇಶಿಸಿದ್ದು, ವಿಳಂಬವಾಗಿರುವ ಕಾರಣ ನೇಮಕಾತಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ನೇಮಕಾತಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಮಂಡಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕೊರೋನಾ ನಿರ್ಬಂಧದಿಂದ ಶಾಲೆಗಳು ಆರಂಭವಾಗುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಸಕಾಲಕ್ಕೆ ಪಠ್ಯಪುಸ್ತಕಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕಿದೆ. ಪ್ರತಿ ವಿದ್ಯಾರ್ಥಿಗೆ ಎರಡು ತಿಂಗಳೊಳಗೆ ಪಠ್ಯಪುಸ್ತಕ ಪೂರೈಕೆ ಮಾಡುವಂತೆ ಸಚಿವರು ಸೂಚನೆ ನೀಡಿದ್ದಾರೆ.
ದೀಕ್ಷಾ ಆಪ್ ಮೂಲಕ ಪದವಿಪೂರ್ವ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಪಠ್ಯಭಾಗಗಳನ್ನು ಅಳವಡಿಸಲಾಗುವುದು. ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು.