ನವದೆಹಲಿ: ಕೊರೊನಾದಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.
ಕೊರೋನಾ ಲಸಿಕೆ ಕುರಿತಂತೆ ರಾಷ್ಟ್ರೀಯ ತಜ್ಞರ ಗುಂಪು ನೀಡಿರುವ ಶಿಫಾರಸ್ಸುಗಳನ್ನು ಸರ್ಕಾರ ಸ್ವೀಕರಿಸಿದೆ. ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಕೋವಿಡ್ ಲಸಿಕೆಯನ್ನು 3 ತಿಂಗಳೊಳಗೆ ಪಡೆದುಕೊಳ್ಳುವಂತಿಲ್ಲವೆಂದು ಆರೋಗ್ಯ ಸಚಿವಾಲಯ ಹೇಳಿದೆ.
ಕೊರೋನಾ ಲಸಿಕೆ ಮೊದಲ ಡೋಸ್ ಪಡೆದುಕೊಂಡ ನಂತರ ಸೋಂಕಿಗೆ ಒಳಗಾಗಿದ್ದರೆ ವೈದ್ಯಕೀಯ ಚೇತರಿಕೆಯ ನಂತರ ಮೂರು ತಿಂಗಳವರೆಗೆ ಎರಡನೇ ಡೋಸ್ ಮುಂದೂಡಲಾಗುತ್ತದೆ. ಆಸ್ಪತ್ರೆಗೆ ದಾಖಲಾದ ಅಥವಾ ಐಸಿಯು ಆರೈಕೆ ಅಗತ್ಯವಿರುವ ಯಾವುದೇ ಗಂಭೀರ ಕಾಯಿಲೆ ಇರುವ ವ್ಯಕ್ತಿಗಳ ಲಸಿಕೆ ಪಡೆಯುವ ಮೊದಲು 4 ರಿಂದ 8 ವಾರಗಳವರೆಗೆ ಕಾಯಬೇಕಿದೆ.
ಒಬ್ಬ ವ್ಯಕ್ತಿ ಲಸಿಕೆ ಪಡೆದ 14 ದಿನಗಳ ನಂತರ ಅಥವಾ ಕೊರೊನಾದಿಂದ ಬಳಲಿದ್ದರೆ RTPCR ನೆಗೆಟಿವ್ ಪರೀಕ್ಷೆಯ ನಂತರ ರಕ್ತದಾನ ಮಾಡಬಹುದು ಎಂದು ತಿಳಿಸಿದೆ. ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಹಾಕಲು ಶಿಫಾರಸು ಮಾಡಲಾಗಿದೆ. ವ್ಯಾಕ್ಸಿನೇಷನ್ ಮೊದಲು ರಾಪಿಡ್ ಪರೀಕ್ಷೆಯಿಂದ ಲಸಿಕೆ ಸ್ವೀಕರಿಸುವವರನ್ನು ಪರೀಕ್ಷಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.