ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಮಾತ್ರ ಕೊರೊನಾ ಗೆಲ್ಲಲು ಸಾಧ್ಯ. ಅನೇಕರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗುವುದಿಲ್ಲ. ಇದ್ರಿಂದ ಪರಿಸ್ಥಿತಿ ಉಲ್ಭಣಿಸುತ್ತದೆ.
ಸಾಮಾನ್ಯವಾಗಿ ಕೊರೊನಾ ಲಕ್ಷಣ ಆರಂಭದಲ್ಲಿ ಸೌಮ್ಯವಾಗಿರುತ್ತದೆ. ಆದ್ರೆ ಒಳಗಿನಿಂದಲೇ ತೊಡಕು ಮಾಡುವ ವೈರಸ್, ರೋಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತದೆ. ವೈದ್ಯರ ಪ್ರಕಾರ ಮೊದಲ ದಿನದಿಂದಲೇ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬಾರದು. ಲಕ್ಷಣ ಸೌಮ್ಯವಾಗಿರಲಿ ಇಲ್ಲವೆ ಗಂಭೀರವಾಗಿರಲಿ ಯಾವುದನ್ನೂ ನಿರ್ಲಕ್ಷ್ಯಿಸದೆ ವೈದ್ಯರನ್ನು ಭೇಟಿಯಾಗಬೇಕು. ಕೊರೊನಾ ಪರೀಕ್ಷೆ ಮಾಡಿಸಬೇಕು. ಕೊರೊನಾ ಪಾಸಿಟಿವ್ ಬಂದಲ್ಲಿ ಮುಚ್ಚಿಡುವ ಅಗತ್ಯವಿಲ್ಲ. ನಿಮ್ಮ ಒಂದು ತಪ್ಪಿನಿಂದ ಅನೇಕರಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಮನೆಯಲ್ಲಿ ಬಂಧಿಯಾಗಿ ಚಿಕಿತ್ಸೆ ಶುರು ಮಾಡಿ.
ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಸ್ಟಿರಾಯ್ಡ್ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಆಸ್ಪತ್ರೆಯಲ್ಲಿರುವ ಎಲ್ಲ ಕೊರೊನಾ ರೋಗಿಗಳಿಗೆ ಸ್ಟಿರಾಯ್ಡ್ ನೀಡಲಾಗ್ತಿದೆ. ಆದ್ರೆ ಇದು ಅತಿಯಾದ್ರೆ ಬ್ಲ್ಯಾಕ್ ಫಂಗಲ್ ಕಾಡುತ್ತದೆ. ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್ ಸೇವನೆ ಕೂಡ ಒಳ್ಳೆಯದಲ್ಲ. ವೈದ್ಯರ ಸಲಹೆ ಮೇರೆಗೆ ಅವರು ನೀಡಿದ ಮಾತ್ರೆ ಮಾತ್ರ ಸೇವನೆ ಮಾಡಬೇಕು.
ಕೊರೊನಾ ಪಾಸಿವಿಟ್ ಬರ್ತಿದ್ದಂತೆ ಜನರು ವೈದ್ಯರನ್ನು ಭೇಟಿಯಾಗುವುದಿಲ್ಲ. ಮನೆಯಲ್ಲಿಯೇ ತಮಗಿಷ್ಟವಾದ ಮಾತ್ರೆ ಸೇವನೆ ಶುರು ಮಾಡ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ಬೇರೆ ಇನ್ಫೆಕ್ಷನ್ ಶುರುವಾಗುತ್ತದೆ. ಹಾಗಾಗಿ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಸಂಪರ್ಕಿಸಿ. ಬೇಕಾದಲ್ಲಿ ಸ್ಕ್ಯಾನ್, ಸಿಟಿ ಸ್ಕ್ಯಾನ್ ಸೇರಿದಂತೆ ಇತರ ಪರೀಕ್ಷೆ ಮಾಡಿಸಿಕೊಳ್ಳಿ.
ಜ್ವರ ಹಾಗೂ ಆಕ್ಸಿಜನ್ ಮಟ್ಟವನ್ನು ಸದಾ ಪರೀಕ್ಷಿಸುತ್ತಿರಬೇಕು. ಇದ್ರ ಬಗ್ಗೆ ಅನವಶ್ಯಕ ಚಿಂತೆ ಬೇಡ. ಭಯಪಡುವ ಅಗತ್ಯವಿಲ್ಲ. ಆಕ್ಸಿಜನ್ ಮಟ್ಟ ಇಳಿಯುತ್ತಿದ್ದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ. ಹಾಗೆ ಸತತ 7 ದಿನಗಳ ಕಾಲ ಜ್ವರವಿದ್ದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗುತ್ತದೆ. ಇದಲ್ಲದೆ ಕೊರೊನಾ ಪರೀಕ್ಷೆ ವರದಿ ಬರುವವರೆಗೆ ಕಾಯುವುದು ಕೂಡ ತಪ್ಪು. ಪರೀಕ್ಷೆಗೆ ನೀಡಿ ಬಂದ ತಕ್ಷಣ ಚಿಕಿತ್ಸೆ ಶುರು ಮಾಡಿ ಐಸೋಲೇಟ್ ಆಗುವುದು ಒಳ್ಳೆಯದು.