ನವದೆಹಲಿ: ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.
ಸಿಬಿಎಸ್ಇ 10 ನೇ ತರಗತಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನಿಗದಿಪಡಿಸಿ ಬೋರ್ಡ್ ಗೆ ಸಲ್ಲಿಸಲು ಪ್ರೌಢಶಾಲೆಗಳಿಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿದೆ. ಅಂಕ ನಿಗದಿಪಡಿಸಿ ಶಾಲೆಗಳಿಗೆ ನೀಡಿದ್ದ ಗಡುವನ್ನು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಜೂನ್ 11 ಒಳಗೆ ಅಂಕ ನಿಗದಿ ಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜೂನ್ 20 ರಂದು ಪಲಿತಾಂಶ ಪ್ರಕಟಿಸಬೇಕೆಂದು ತಿಳಿಸಲಾಗಿತ್ತು. ಆದರೆ, ಅನೇಕ ರಾಜ್ಯಗಳಲ್ಲಿ ಕೊರೋನಾ ಲಾಕ್ ಡೌನ್, ಕಠಿಣ ನಿರ್ಬಂಧ ಜಾರಿಯಲ್ಲಿರುವ ಕಾರಣ ಶಿಕ್ಷಕರು ಮತ್ತು ಶಾಲೆಯ ಸಿಬ್ಬಂದಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಯ ಫಲಿತಾಂಶ 2021 ರ ಜುಲೈನಲ್ಲಿ ಬಿಡುಗಡೆಯಾಗಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಡಾ. ಸನ್ಯಂ ಭಾರದ್ವಾಜ್ ತಿಳಿಸಿದ್ದಾರೆ. ಈ ಹಿಂದೆ ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಯ 2021 ಫಲಿತಾಂಶಗಳನ್ನು ಜೂನ್ ಮೂರನೇ ವಾರದೊಳಗೆ ಘೋಷಿಸಲು ಯೋಜಿಸಿತ್ತು. ಪರೀಕ್ಷೆಯ ಅಂಕಗಳನ್ನು ಪಟ್ಟಿ ಮಾಡಲು ಸಮಯದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಫಲಿತಾಂಶ ವಿಳಂಬವಾಗಲಿದೆ ಎನ್ನಲಾಗಿದೆ.