
ಬೆಂಗಳೂರು: ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಅನುಕೂಲವಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಿಎಂ ನೇತೃತ್ವದಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ತೀರ್ಮಾನ ಕೈಗೊಂಡು ಸಿಎಂ ಪ್ಯಾಕೇಜ್ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಾಲದ ಕಂತು ಮುಂದೂಡಿಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದ್ದು, ಈ ಕುರಿತಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಹಕಾರ ಸಂಘಗಳ ಮೂಲಕ ರೈತರು, ಸ್ತ್ರೀಶಕ್ತಿ ಸಂಘದ ಮಹಿಳೆಯರು ಪಡೆದುಕೊಂಡ ಸಾಲದ ಕಂತು ಮುಂದೂಡಬೇಕು. ಬಡ್ಡಿ ಅಥವಾ ಸಾಲಮನ್ನಾ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಮಾಡಲು ಸಾಧ್ಯವಾಗದಿರಬಹುದು. ಆದರೆ, ಒಂದಿಷ್ಟು ವಿನಾಯಿತಿ ಸಿಗಬಹುದು. ಸಾಲದ ಕಂತು ಪಾವತಿಸಲು ಅವಧಿ ವಿಸ್ತರಿಸಬಹುದಾಗಿದೆ. ಬಡ್ಡಿ ರಿಯಾಯಿತಿ ಎಂದು ಹೇಳಲಾಗಿದೆ.
ವಿದ್ಯುತ್ ಬಿಲ್, ನೀರಿನ ಬಿಲ್ ನಲ್ಲಿ ಹೋಟೆಲ್ ಗಳಿಗೆ ವಿನಾಯಿತಿ, ಆಟೋ, ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನೆರವು, ಕಾರ್ಮಿಕರು, ರೈತರು, ತರಕಾರಿ ಬೆಳೆಗಾರರು ಸೇರಿದಂತೆ ವಿವಿಧ ವಲಯದವರಿಗೆ ಆರ್ಥಿಕ ನೆರವು ಸಿಗಬಹುದು ಎಂದು ಹೇಳಲಾಗಿದೆ.