ಚಂಡಿಗಢ: ಲಿವ್ ಇನ್ ರಿಲೇಷನ್ ಶಿಪ್ ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆ ಕೋರಿ ಪಂಜಾಬ್ ತಾರ್ನ್ ತರಣ್ ಜಿಲ್ಲೆಯ ಓಡಿಹೋದ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಹೆಚ್.ಎಸ್. ಮದನ್ ಈ ಆದೇಶ ಜಾರಿಗೊಳಿಸಿದ್ದಾರೆ.
ಅರ್ಜಿದಾರ ಜೋಡಿಯಾದ ಗುಲ್ಜಾ ಕುಮಾರಿ ಮತ್ತು ಗುರ್ವಿಂದರ್ ಸಿಂಗ್ ಅವರು ಲಿವ್ ಇನ್ ಸಂಬಂಧದಲ್ಲಿದ್ದು, ಒಟ್ಟಿಗೇ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲು ಅವರು ನಿರ್ಧರಿಸಿದ್ದಾರೆ. ಹುಡುಗಿಯ ಪೋಷಕರಿಂದ ಜೀವಕ್ಕೆ ಅಪಾಯವಿದೆ ಎಂದು ಅವರು ಭಯಗೊಂಡಿದ್ದರು.
ವಾಸ್ತವವಾಗಿ ಅರ್ಜಿದಾರರು ತಮ್ಮ ರಿಲೇಶನ್ ಗೆ ಅನುಮೋದನೆ ನೀಡುವಂತೆ ಕೋರಿದ್ದಾರೆ. ಇದು ನೈತಿಕ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಮತ್ತು ಅರ್ಜಿ ಆಧರಿಸಿ ಯಾವುದೇ ರಕ್ಷಣಾ ಆದೇಶವನ್ನು ನೀಡಲಾಗುವುದಿಲ್ಲ ಎಂದು ಅರ್ಜಿ ವಜಾಗೊಳಿಸಲಾಗಿದೆ. ಕಳೆದ ವಾರದ ಆದೇಶದಲ್ಲಿ ನ್ಯಾಯಮೂರ್ತಿ ಮದನ್ ಈ ಬಗ್ಗೆ ಆದೇಶ ಬರೆದಿದ್ದಾರೆ.
ಅರ್ಜಿದಾರರ ಪರ ವಕೀಲ ಜೆ.ಎಸ್. ಠಾಕೂರ್, ಹುಡುಗಿಗೆ 19 ವರ್ಷ ಮತ್ತು ಹುಡುಗನಿಗೆ 22 ವರ್ಷವಾಗಿದ್ದು ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದ್ದಾರೆ. ಆಧಾರ್ ಕಾರ್ಡ್ ನಂತಹ ಕೆಲವು ದಾಖಲೆಗಳನ್ನು ಹುಡುಗಿಯ ಕುಟುಂಬದವರು ಹೊಂದಿರುವುದರಿಂದ ಜೋಡಿಗೆ ಮದುವೆಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಈಗಾಗಲೇ ಲಿವ್ ಇನ್ ಸಂಬಂಧವನ್ನು ಎತ್ತಿ ಹಿಡಿದಿದ್ದರಿಂದ ಅವರು ಮದುವೆಯಾಗುವವರೆಗೂ ಅವರ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಲಿವ್ ಇನ್ ಸಂಬಂಧದಲ್ಲಿರುವ ಓಡಿ ಹೋದ ಜೋಡಿಗಳಿಗಾಗಿ ರಕ್ಷಣೆ ನೀಡಲು ನಿರ್ದೇಶನ ನೀಡಿದರೆ ಸಮಾಜದ ಸಾಮಾಜಿಕ ನೈತಿಕತೆಗೆ ತೊಂದರೆಯಾಗುತ್ತದೆ ಎಂದು ಇದೇ ಹೈಕೋರ್ಟ್ ನ ಮತ್ತೊಂದು ನ್ಯಾಯಪೀಠ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. 18 ವರ್ಷದ ಹುಡುಗಿ, 21 ವರ್ಷದ ಹುಡುಗ ಲಿವ್ ಇನ್ ಸಂಬಂಧದಲ್ಲಿದ್ದು, ಒಟ್ಟಿಗೆ ವಾಸಿಸುತ್ತಿದ್ದರು ಸಂಬಂಧಿಕರಿಂದ ರಕ್ಷಣೆ ಕೋರಿದ್ದ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.