ಡೆಹ್ರಾಡೂನ್: ಉತ್ತರಾಖಂಡ್ ಪೊಲೀಸರು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಔಷಧ, ವೈದ್ಯಕೀಯ ಉಪಕರಣ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಸಹಾಯವಾಣಿ ಆರಂಭಿಸಿದ್ದಾರೆ.
ಈ ಸಹಾಯವಾಣಿಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದ್ದು, ಸಹಾಯವಾಣಿ ನಂಬರ್ ಗೆ ಕಿಡಿಗೇಡಿಯೊಬ್ಬ ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳುಹಿಸಿದ್ದಾನೆ. ಕೊರೋನಾ ಬಿಕ್ಕಟ್ಟಿನ ಲಾಭ ಪಡೆದ ಕೆಲವರು ವೈದ್ಯಕೀಯ ಪರಿಕರ, ಔಷಧಿ, ಆಮ್ಲಜನಕ ಮೊದಲಾದವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಉತ್ತರಾಖಂಡ ಪೊಲೀಸ್ ಇಲಾಖೆ ಸಹಾಯವಾಣಿ ಆರಂಭಿಸಿದೆ.
ಈ ಸಹಾಯವಾಣಿ ಸಂಖ್ಯೆಗೆ ಅನೇಕ ಜನ ಫೋಟೋ, ವಿಡಿಯೋ ಸಮೇತ ಅಕ್ರಮದ ಬಗ್ಗೆ ದೂರು ನೀಡಿದ್ದಾರೆ. ಈ ನಡುವೆ ಕಿಡಿಗೇಡಿಯೊಬ್ಬ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿದ್ದು, ಆತನ ವಿರುದ್ಧ ಈ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.