ದೀರ್ಘಾವಧಿ ಕೆಲಸವೂ ನಿಮ್ಮ ಸಾವಿಗೆ ಕಾರಣವಾಗಬಹುದು ಎನ್ನುವ ಮಾಹಿತಿ ಗೊತ್ತಾಗಿದೆ. ಕೊರೋನಾ ಸಾಂಕ್ರಮಿಕ ರೋಗದಿಂದಾಗಿ ಕೆಲಸದ ವೇಗವನ್ನು ಮತ್ತಷ್ಟು ಹೆಚ್ಚಿಸುವ ಪ್ರವೃತ್ತಿ ಬೆಳೆದಿದೆ. ಇಂತಹ ಕೆಟ್ಟ ಪ್ರವೃತ್ತಿಯಿಂದ ವರ್ಷಕ್ಕೆ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ.
ಸುದೀರ್ಘ ಕೆಲಸದ ಸಮಯಕ್ಕೆ ಸಂಬಂಧಿಸಿದ ಜೀವಹಾನಿಯ ಮೊದಲ ಜಾಗತಿಕ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. ಎನ್ವಿರಾನ್ಮೆಂಟ್ ಇಂಟರ್ನ್ಯಾಷನಲ್ ಜರ್ನಲ್ 2016 ರಲ್ಲಿ ದೀರ್ಘ ಕೆಲಸದ ಸಮಯಕ್ಕೆ ಸಂಬಂಧಿಸಿದಂತೆ 7,45,000 ಜನರು ಪಾರ್ಶ್ವವಾಯು, ಹೃದ್ರೋಗದಿಂದ ಸಾವನ್ನಪ್ಪಿರುವುದಾಗಿ ಹೇಳಿದೆ. 2000 ದಿಂದ ಇದು ಸುಮಾರು ಶೇಕಡ 30 ರಷ್ಟು ಜಾಸ್ತಿಯಾಗಿದೆ.
ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರಿ ಗಂಭೀರ ಅಪಾಯ ತರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಸರ, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಇಲಾಖೆಯ ನಿರ್ದೇಶಕಿ ಮಾರಿಯಾ ನೀರಾ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ರಕ್ಷಣೆಗೆ ಉತ್ತೇಜನ ನೀಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಜಂಟಿ ಅಧ್ಯಯನದಲ್ಲಿ ಮೃತಪಟ್ಟವರಲ್ಲಿ 72 ರಷ್ಟು ಪುರುಷರು, ಮಧ್ಯವಯಸ್ಕರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ ಎಂದು ಗೊತ್ತಾಗಿದೆ.
ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಫೆಸಿಪಿಕ್ ಪ್ರದೇಶದಲ್ಲಿ ವಾಸಿಸುವ ಜನರು, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನಿತ ಪ್ರದೇಶದಲ್ಲಿ ಇದು ಹೆಚ್ಚು ಪರಿಣಾಮ ಬೀರಿದೆ ಎನ್ನುವುದು ಗೊತ್ತಾಗಿದೆ. ಒಟ್ಟಾರೆಯಾಗಿ 194 ದೇಶಗಳಲ್ಲಿ ಅಧ್ಯಯನ ನಡೆಸಿ ದತ್ತಾಂಶ ಸಂಗ್ರಹಿಸಲಾಗಿದ್ದು, 55 ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಕೆಲಸ ಮಾಡುವ ಶೇಕಡ 35 ರಷ್ಟು ಮಂದಿಗೆ ಪಾರ್ಶ್ವವಾಯು ಅಪಾಯವಾಗಿದೆ. ಈ ಪ್ರಮಾಣ ವಾರಕ್ಕೆ 35 ರಿಂದ 48 ಗಂಟೆಗಳ ಕೆಲಸಕ್ಕೆ ಹೋಲಿಸಿದರೆ ಇಸ್ಕೆಮಿಕ್ ಹೃದ್ರೋಗದಿಂದ ಸಾಯುವವರಿಗಿಂತ ಶೇಕಡ 17 ರಷ್ಟು ಹೆಚ್ಚಿನ ಅಪಾಯ ಹೊಂದಿದೆ ಎನ್ನಲಾಗಿದೆ.
2000 ದಿಂದ 2016 ರ ಅವಧಿಯನ್ನು ಒಳಗೊಂಡ ಈ ಅಧ್ಯಯನದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಅವಧಿ ಒಳಗೊಂಡಿಲ್ಲ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು, ಕೊರೋನಾ ಪರಿಸ್ಥಿತಿಯಲ್ಲಿ ಜಾಗತಿಕ ಆರ್ಥಿಕ ಕುಸಿತದ ಕಾರಣ ಕೆಲಸಗಾರರ ಮೇಲೆ ಅಪಾಯ ಹೆಚ್ಚಿದೆ. ಕೆಲಸದ ಒತ್ತಡವೂ ಜಾಸ್ತಿಯಾಗಿದೆ. ಕೊರೋನಾ ಕಾರಣದಿಂದ ಕೆಲಸದ ಸಮಯದ ಹೆಚ್ಚಳದ ಪ್ರವೃತ್ತಿ ಹೆಚ್ಚಾಗಿದ್ದು, ಬೆಳವಣಿಗೆಯ ವೇಗದಲ್ಲಿ ಶೇಕಡ 9 ರಷ್ಟು ಜನರು ದೀರ್ಘಕಾಲ ಕೆಲಸ ಮಾಡುತ್ತಾರೆ ಎಂದು ಅಂದಾಜಿಸಿದ್ದಾರೆ.
ಡಬ್ಲ್ಯುಹೆಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸೇರಿದಂತೆ ಸಿಬ್ಬಂದಿ ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಬಹಳ ಸಮಯ ಕೆಲಸ ಮಾಡುತ್ತಿದ್ದಾರೆ ಎಂದು ನೀರಾ ತಿಳಿಸಿದ್ದು, ಯು.ಎನ್. ಅಧ್ಯಯನದ ಆಧಾರದಲ್ಲಿ ನೀತಿಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಲ್ಲಿ ದೀರ್ಘ ಕೆಲಸದ ಸಮಯವನ್ನು ಹೆಚ್ಚಿಸದಿರುವುದು ನಿಜವಾಗಿಯೂ ಉತ್ತಮ ಆಯ್ಕೆ ಎಂದು ಡಬ್ಲ್ಯುಹೆಚ್ಒ ತಾಂತ್ರಿಕ ಅಧಿಕಾರಿ ಫ್ರಾಂಕ್ ಪೆಗಾ ಹೇಳಿದ್ದಾರೆ.