ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಸೋಮವಾರ ವಿರಾಮ ನೀಡಿವೆ.
ಭಾನುವಾರ ಪೆಟ್ರೋಲ್ ಬೆಲೆ ಲೀಟರ್ ಗೆ 24 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 27 ಪೈಸೆ ಹೆಚ್ಚಳ ಮಾಡಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ 99 ಗರಿಷ್ಠ ಮಟ್ಟ ತಲುಪಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 92.58 ರೂ., ಡೀಸೆಲ್ 83.52 ರೂಪಾಯಿ ಇದೆ. ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ 98.88 ರೂ., ಡೀಸೆಲ್ 90.40 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ 94.31 ರೂ., ಡೀಸೆಲ್ 88.07 ರೂ. ಇದೆ. ಕೊಲ್ಕೊತ್ತಾದಲ್ಲಿ ಪೆಟ್ರೋಲ್ 92.67 ರೂ., ಡೀಸೆಲ್ 86.06 ರೂ. ಇದೆ.
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಮುಂಬೈ ಕೂಡ 100 ರೂ. ಸನಿಹಕ್ಕೆ ಬಂದಿದೆ.
ಸ್ಥಳೀಯ ತೆರಿಗೆಗಳಾದ ಮತ್ತು ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ರಾಜಸ್ಥಾನವು ದೇಶದಲ್ಲಿ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸುತ್ತದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಇವೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ದೇಶದಲ್ಲಿಯೇ ಅತಿಹೆಚ್ಚು ದರ ಇದೆ. ಪೆಟ್ರೋಲ್ ಲೀಟರ್ ಗೆ 103.52 ರೂ., ಡೀಸೆಲ್ 95.99 ರೂ. ಇದೆ. ಈ ತಿಂಗಳಲ್ಲಿ 9 ಬಾರಿ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ 2.19 ರೂ, ಡೀಸೆಲ್ 2.49 ರೂ. ಹೆಚ್ಚಳವಾಗಿದೆ.
ಕಳೆದ ವರ್ಷ ಮಾರ್ಚ್ ನಿಂದ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದ ನಂತರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 22.99 ರೂಪಾಯಿ ಹಾಗೂ ಡೀಸೆಲ್ ಗೆ 20.93 ರೂಪಾಯಿಯಷ್ಟು ಜಾಸ್ತಿಯಾಗಿದೆ.