ಬೆಂಗಳೂರು: ಕೊರೊನಾ ಆರ್ಭಟದ ನಡುವೆಯೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಹೆಚ್ಚುತ್ತಿದ್ದು, ಮಾರಕ ಸೋಂಕಿಗೆ ಹಲವರು ಬಲಿಯಾಗುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ಈವರೆಗೆ ಎಷ್ಟು ಜನ ಬಲಿಯಾಗಿದ್ದಾರೆ ಎಂಬ ಬಗ್ಗೆ ನಿಖರ ಅಂಕಿ-ಅಂಶ ತಿಳಿದಿಲ್ಲ. ಈ ಬಗ್ಗೆ ಪರಿಶೀಲಿಸಲು ಇಂದಿನಿಂದ ಸಮಿತಿ ರಚಿಸಲಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ನಾಳೆಯಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಬಳಿಕ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ ಗೆ ಇಬ್ಬರು ಬಲಿ
ಬ್ಲ್ಯಾಕ್ ಫಂಗಸ್ ಗೆ 7 ವಾರಗಳ ಚಿಕಿತ್ಸೆ ಅಗತ್ಯವಿದೆ. ಒಬ್ಬ ವ್ಯಕ್ತಿಗೆ 3-4 ಲಕ್ಷದವರೆಗೆ ಚಿಕಿತ್ಸೆಗೆ ಖರ್ಚಾಗಲಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ 20,000 ಡೋಸ್ ಔಷಧಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಕೋವಿಡ್ ನಿಂದ ಗುಣಮುಖರಾದವರಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ದೃಷ್ಟಿ ಹೋಗುತ್ತದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಸಾವು ಕೂಡ ಸಂಭವಿಸುತ್ತದೆ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಎಚ್ಚರಿಕೆ ನೀಡಿದರು.