ಉಡುಪಿ; ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಆರಂಭವಾಗಿವೆ. ಅಲೆಯ ಹೊಡೆತಕ್ಕೆ ಸಮುದ್ರ ತೀರದ ಕಟ್ಟಡಗಳು ನೀರು ಪಾಲಾಗಿವೆ.
ಉಡುಪಿ, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಆರಂಭವಾಗಿದ್ದು, ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಏಳುತ್ತಿದ್ದು, ತೀರಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಮರವಂತೆ, ಉಪ್ಪುಂದ, ಪಡುಕೆರೆಗಳಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ಮಲ್ಫೆ ಬೀಚ್ ಸಂಪೂರ್ಣ ಮುಳುಗಡೆಯಾಗಿದೆ. ಮುಂಜಾಗೃತಾ ಕ್ರಮವಾಗಿ ಮೀನುಗಾರರನ್ನು ಸ್ಥಳಾಂತರಿಸಲಾಗಿದೆ.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಉಳ್ಳಾಲ, ಬೈಕಂಪಾಡಿ, ಸೋಮೇಶ್ವರದಲ್ಲಿ ಅಂಗಡಿಗಳು ಸಮುದ್ರಪಾಲಾಗಿವೆ. ಕಟ್ಟಡಗಳು ಧರೆಗುರುಳಿದ್ದು ಮನೆಗಳಿಗೆ ನೀರು ನುಗ್ಗುತ್ತಿವೆ.
ಈ ನಡುವೆ ಚಂಡಮಾರುತ ಹಿನ್ನೆಲೆಯಲ್ಲಿ ಗಂಟೆಗೆ 150ರಿಂದ 160 ಕೀ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, 175 ಕಿ.ಮೀ ವೇಗವನ್ನೂ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.