ಬೆಂಗಳೂರು: ಉಪಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸರ್ಕಾರ ಎಲೆಕ್ಷನ್ ನಡೆಸುವಾಗ ಜಾಗೃತವಾಗಿರಬೇಕಿತ್ತು. ಚುನಾವಣೆಗಳೇ ಬೇಡ ಎಂದು ಸರ್ಕಾರ ಒಂದು ಮಾತು ಹೇಳಿದ್ದರೆ ಚುನಾವಣಾ ಆಯೋಗ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಚುನಾವಣೆ ಘೋಷಣೆ ಬಳಿಕ ಆಯೋಗ ಸಾಕಷ್ಟು ಎಚ್ಚರಿಕೆಯನ್ನು ನೀಡಿತ್ತು. ಆದರೂ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಬೈ ಎಲೆಕ್ಷನ್ ಡ್ಯೂಟಿಗೆ ತೆರಳಿದ್ದ 30ಕ್ಕೂ ಹೆಚ್ಚು ಶಿಕ್ಷಕರ ಸಾವಿಗೆ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಬೇಜವಾಬ್ದಾರಿಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಸ್ಫೋಟಗೊಳ್ಳುವ ಆತಂಕ; ತಜ್ಞರ ಎಚ್ಚರಿಕೆ….!
ಇದು ಸರ್ಕಾರದ ಸ್ವಯಂಕೃತ ಅಪರಾಧ. ಚುನಾವಣೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಜನರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ನಾನೂ ಕೂಡ ತುಂಬಾ ಪ್ರಯತ್ನ ಮಾಡಿದೆ. ಆದರೆ ಚುನಾವಣಾ ಪ್ರಚಾರದ ವೇಳೆ ಜನರ ಜಂಜಾಟ ಬಹಳ ಇತ್ತು. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕೋವಿಡ್ ಗೆ ಬಲಿಯಾದ ಶಿಕ್ಷಕರ ಕುಟುಂಬದ ಬಗ್ಗೆ ಸರ್ಕಾರ ಯೋಚಿಸಬೇಕಿದೆ ಎಂದು ಹೇಳಿದರು.