alex Certify ಮಹಾ ಮಳೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: 2 ದಿನ ಭಾರೀ ಮಳೆ- ಶಿವಮೊಗ್ಗದಲ್ಲಿ ರೆಡ್ ಅಲರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾ ಮಳೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: 2 ದಿನ ಭಾರೀ ಮಳೆ- ಶಿವಮೊಗ್ಗದಲ್ಲಿ ರೆಡ್ ಅಲರ್ಟ್

ಶಿವಮೊಗ್ಗ: ಹವಾಮಾನ ತಜ್ಞರ ಮಾಹಿತಿಯಂತೆ ನಾಳೆಯಿಂದ ಮುಂದಿನ 2-3 ದಿನಗಳ ಕಾಲ ರಾಜ್ಯದಲ್ಲಿ ಸಾಮಾನ್ಯದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಎಲ್ಲಾ ತಾಲೂಕುಗಳ ತಹಶಿಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನಲೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕೊರೋನಾ ಸೋಂಕು ಜಿಲ್ಲೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಜೀವ ಮತ್ತು ಪ್ರಾಣ ಹಾನಿಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ರಕ್ಷಣಾ, ಕಂದಾಯ, ಅಗ್ನಶಾಮಕ,  ಮೆಸ್ಕಾಂ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿದ್ದತೆಗಳನ್ನು ಕೈಗೊಂಡು ಸದಾಸನ್ನದ್ಧರಾಗಿರುವಂತೆ ಸೂಚಿಸಿದ ಅವರು ಮುಂಗಾರು ಮಳೆಯಿಂದಾಗುವ ಅನಾಹುತದ ಪರಿಹಾರ ಕಾರ್ಯಗಳಿಗೆ ತಾಲೂಕುವಾರು 25ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಕಾಲಕ್ಕೆ ನೆರವಿಗೆ ಧಾವಿಸುವ ಪ್ರಕೃತಿ ವಿಕೋಪ ಕಾರ್ಯಾಚರಣೆ ತಂಡದ ಸದಸ್ಯರ ಮೊಬೈಲ್ ನಂಬರ್  ಸಂಗ್ರಹಿಸಿಟ್ಟುಕೊಳ್ಳುವಂತೆ ಹಾಗೂ ಮಳೆಗಾಳಿಯಿಂದ ಧರೆಗುರುಳುವ ಮರಗಳನ್ನು ತೆರವುಗೊಳಿಸಲು ಅಗತ್ಯ ಸಿಬ್ಬಂದಿ ಸಿದ್ದವಾಗಿರಲು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಚರಂಡಿಗಳು ಸರಾಗವಾಗಿ ಮಳೆ ನೀರನ್ನು ಹರಿಯುವಂತೆ ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಮಳೆ ಹಾನಿಯಿಂದ ರಕ್ಷಣೆಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನು ತೆರೆದು ಸಿಬ್ಬಂಧಿಯನ್ನು ನಿಯೋಜಿಸುವಂತೆ ಸೂಚಿಸಿದರು.

ವಿಶೇಷವಾಗಿ ಜಿಲ್ಲೆಯ ಜಲಾಶಯ, ನಾಲೆ, ನದಿದಂಡೆಗಳ ಪಾತ್ರದಲ್ಲಿರುವ ನಿವಾಸಿಗಳು ತುರ್ತು ಕ್ರಮ ವಹಿಸುವಂತೆ ಸೂಚಿಸಿದ ಅವರು, ಭಾರೀ ಮಳೆಯಿಂದ ಅನಾಹುತ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಬಸ್ ಗಳನ್ನು ರಸ್ತೆಗೆ ಇಳಿಸದಂತೆ ಹಾಗೂ ಭಾರೀ ಮಳೆ ಬೀಳುವ ಆಗುಂಬೆಯಂತಹ ಪ್ರದೇಶದಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಒಂದೊಮ್ಮೆ ಅವಘಡಗಳು ಸಂಭವಿಸಿದಲ್ಲಿ ಅಲ್ಲಿನ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಲಾಗುವುದು ಎಂದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚಿಗೆ ಸಿಡಿಲಿನಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ತುರ್ತು ಪರಿಹಾರಧನ ಬಿಡುಗಡೆ ಮಾಡುವಂತೆ ತಹಶಿಲ್ದಾರರಿಗೆ ಸೂಚಿಸಿದರು.

ಮಳೆ ಹಾನಿಯಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತ ಸಂಧರ್ಭ ಎದುರಾದಲ್ಲಿ ಅದನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಆರೋಗ್ಯ ಕೇಂದ್ರ ಹಾಗೂ ವಸತಿ ವ್ಯವಸ್ಥೆ ಮಾಡಿಕೊಂಡಿರಲು ಸೂಚಿಸಿದರು. ಕೊರೋನಾ ಸೋಂಕಿತರಿಂದ ಈ ಕೇಂದ್ರ ಸಂಪೂರ್ಣ ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ ಪ್ರತಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಟಾಂ ಟಾಂ ಮೂಲಕ ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ  ಜಿ.ಅನುರಾಧ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಶಿಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...