ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ವಿಚಾರವಾಗಿ ನ್ಯಾಯಾಂಗ ನೀಡಿದ ನಿರ್ದೇಶನಗಳ ವಿರುದ್ಧವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವವಿದೆ. ಹಾಗಂತ ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ತಮ್ಮ ಹೇಳಿಕೆಗೆ ಸಿ.ಟಿ. ರವಿ ಸಮರ್ಥನೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ನಾನು ನ್ಯಾಯಾಲಯದ ಬಗ್ಗೆ ಯಾವುದೇ ಅಗೌರವದ ಮಾತುಗಳನ್ನಾಡಿಲ್ಲ. ನಾನು ಹೇಳಿದ್ದು ನ್ಯಾಯಾಧೀಶರು ಸರ್ವಜ್ಞರಲ್ಲ . ಅವರು ತಾಂತ್ರಿಕ ಸಮಿತಿಯ ವರದಿಯನ್ನ ಆಧರಿಸಿ ನಿರ್ದೇಶನ ನೀಡ್ತಾರೆ. ಇದ್ರಲ್ಲಿ ತಪ್ಪೇನಿದೆ..? ಅಗೌರವದ ಮಾತು ಎಲ್ಲಿಂದ ಬಂತು..? ಅಪನಂಬಿಕೆ ದೃಷ್ಟಿಯಲ್ಲಿ ನೋಡಿದ್ದು ಅವರ ತಪ್ಪು. ಸರ್ವಜ್ಞ ಅಲ್ಲ ಅನ್ನೋದು ಅಸಂವಿಧಾನಿಕ ಪದವೇ..? ನಿಂದೆನೆಯೇ..? ಇಲ್ಲ ಟೀಕೆಯೇ..? ಎಂದು ಪ್ರಶ್ನೆ ಮಾಡಿದ್ದಾರೆ.
ಕೆಲವರಿಗೆ ವೈಚಾರಿಕ ಕಾರಣಕ್ಕೆ ಸಿ.ಟಿ. ರವಿಯನ್ನ ಕಂಡರೆ ಆಗೋದಿಲ್ಲ. ಇನ್ನೂ ಕೆಲವರಿಗೆ ಹೊಟ್ಟೆಕಿಚ್ಚಿನ ಪರಮಾವಧಿ. ಅದಕ್ಕೆ ತಪ್ಪು ಹುಡುಕುವ ಕೆಲಸ ಮಾಡುತ್ತಿರ್ತಾರೆ. ಪ್ರಧಾನಿ ಮೋದಿಯನ್ನ ನರಹಂತಕ ಎಂದು ಕರೆದಿದ್ದು ಅಸಂವಿಧಾನಿಕ ಪದವಾಗಿದೆ ಎಂದು ಗುಡುಗಿದ್ರು.