ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮೇ 24ರವರೆಗೂ ಲಾಕ್ಡೌನ್ ಆದೇಶ ವಿಧಿಸಲಾಗಿದೆ. ಈಗಾಗಲೇ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಅವಧಿಯನ್ನ ವಿಸ್ತರಿಸೋದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಡ್ತಿದ್ದಾರೆ. ಮೈಸೂರಿನಲ್ಲಿ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ. ಸೋಮಶೇಖರ್ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದ್ರು.
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೊದಲು ಜನತಾ ಕರ್ಫ್ಯೂವನ್ನ ಜಾರಿಗೆ ತಂದಿತು. ಆದರೆ ಈ ವೇಳೆಯಲ್ಲೂ ಜನರನ್ನ ನಿಯಂತ್ರಣ ಮಾಡೋದು ಸಾಧ್ಯವಾಗದ ಕಾರಣ ಲಾಕ್ಡೌನ್ ಆದೇಶವನ್ನ ತರಲಾಯ್ತು. ಲಾಕ್ಡೌನ್ ಹೇರಿದ್ರೂ ಸಹ ಜನರು ಅನವಶ್ಯಕವಾಗಿ ಬೀದಿಗಳಲ್ಲಿ ಓಡಾಡುತ್ತಾರೆ. ದಿನಸಿ ಅಂಗಡಿ ಪ್ರತಿದಿನ ತೆರೆದಿದ್ರೂ ಸಹ ಜನರು ಒಂದೇ ದಿನ ಎಲ್ಲವನ್ನೂ ಕೊಂಡುಕೊಳ್ಳಬೇಕು ಅಂತಾ ಬರುತ್ತಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಆದೇಶ ಮೇ 24ರವರೆಗೂ ಇರಲಿದೆ. ಈ ಲಾಕ್ಡೌನ್ ಮುಗಿಯಲು ಇನ್ನೂ ಸಮಯವಿದೆ. ಆನಂತರ ಲಾಕ್ಡೌನ್ ಆದೇಶ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದು ಹೇಳಿದ್ರು.
ಇನ್ನು ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವ್ರು, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ್ದೇನೆ. ಯಾರೇ ಆಗಿದ್ದರೂ ಸಹ ವೈದ್ಯರ ಮೇಲೆ ಹಲ್ಲೆ ಮಾಡೋದು ಸರಿಯಲ್ಲ. ಈ ಪ್ರಕರಣದ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಇನ್ಮುಂದೆ ವೈದ್ಯರಿಗೆ ಯಾವುದೇ ತೊಂದರೆ ಆಗದಂತೆ ಬಂದೋಬಸ್ತ್ ಮಾಡಲಾಗುತ್ತೆ ಎಂದು ಹೇಳಿದ್ರು.