ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಜರಿದಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಾವಿನ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಬಾರದು ಎಂದು ಗುಡುಗಿದ್ರು.
ಪ್ರಸ್ತುತ ಇಡೀ ಮಾನವ ಕುಲಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಸಂಕಷ್ಟವನ್ನ ಎಲ್ಲರೂ ಸೇರಿ ಎದುರಿಸಬೇಕಾಗಿದೆ. ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಲು ಹೋಗಬಾರದು. ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದವರು. ಈಗ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಇದ್ದಾರೆ. ಈ ಸ್ಥಾನದಲ್ಲಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೆಯ ಸಲಹೆಗಳನ್ನ ನೀಡಲಿ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಯಲ್ಲಿ ಕೈಜೋಡಿಸಲಿ. ರಾಜ್ಯದಲ್ಲಿ ಸಾವು – ನೋವುಗಳ ಸಂಖ್ಯೆಯನ್ನ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ. ಇದೆಲ್ಲವನ್ನ ಬಿಟ್ಟು ರಾಜಕೀಯ ಮಾಡ್ತಾ ಕೂರಬೇಡಿ ಎಂದು ಕುಟುಕಿದ್ರು.