ಬೆಂಗಳೂರು: ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಧರಣಿ ನಡೆಸಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈ ನಾಯಕರು ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರು ಬೀದಿ ಬೀದಿಯಲ್ಲಿ ಸಾಯುವ ಸ್ಥಿತಿ ಬಂದಿದೆ. ಆಕ್ಸಿಜನ್, ಬೆಡ್, ಚಿಕಿತ್ಸೆ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ನ್ಯಾಯಾಲಯಗಳು ಜನರ ದನಿಯಾಗಿ ನಿಲ್ಲುವ ಸ್ಥಿತಿ ಬಂದಿದೆ ಆದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಸರ್ಕಾರ ಕಾಟಾಚಾರಕ್ಕಾಗಿ ಲಸಿಕಾ ಅಭಿಯಾನ ಆರಂಭಿಸಿದೆ. 2ನೇ ಡೋಸ್ ಲಸಿಕೆ ಯಾರಿಗೂ ಸಿಗುತ್ತಿಲ್ಲ. ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲೂ ಆಗುತ್ತಿಲ್ಲ. ಸೂಕ್ತ ವ್ಯವಸ್ಥೆ ಇಲ್ಲದೇ ಲಸಿಕೆ ಅಭಿಯಾನ ಆರಂಭಿಸಿದ್ದಾದರೂ ಯಾಕೆ? ಎಂದು ವಾಗ್ದಾಳಿ ನಡೆಸಿದರು.