ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ಆಕ್ಸಿಜನ್, ಐಸಿಯು ಆಯ್ತು ಈಗ ವ್ಯಾಕ್ಸಿನ್ ಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಜ್ಞರ ಎಚ್ಚರಿಕೆ ಕಡೆಗಣಿಸಿ ಜನರನ್ನು ಸಾವಿನ ದವಡೆಗೆ ದೂಡಿದ್ದೂ ಅಲ್ಲದೇ ಲಸಿಕೆ ಹಂಚಿಕೆಯಲ್ಲಿಯೂ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಆಕ್ಸಿಜನ್, ಐಸಿಯು, ರೆಮಿಡಿಸಿವಿರ್, ಬೆಡ್, ಚಿಕಿತ್ಸೆ ಕೊಡಲಾಗದೆ ಜನರನ್ನು ಹಾದಿ ಬೀದಿಯಲ್ಲಿ ಕೊಲ್ಲುತ್ತಿರುವ ರಾಜ್ಯ ಸರ್ಕಾರ ಲಸಿಕೆ ವೈಫಲ್ಯದ ಬಗ್ಗೆ ಹೈಕೋರ್ಟ್ ತಪರಾಕಿ ಕೊಟ್ಟರೂ ಎಚ್ಚೆತ್ತುಕೊಳ್ಳುತ್ತಿಲ್ಲ. ನಾವು ಅನ್ನ ಭಾಗ್ಯದಲ್ಲಿ ಅಕ್ಕಿ ಕೊಟ್ಟೆವು, ಇಂದಿರಾ ಕ್ಯಾಂಟೀನ್ನಲ್ಲಿ ಅನ್ನ ಕೊಟ್ಟೆವು. ಬಿಜೆಪಿ ಕೊಟ್ಟಿದ್ದು ಸಾವಿನ ಭಾಗ್ಯ, ಸ್ಮಶಾನ ಭಾಗ್ಯ. ಬಿಜೆಪಿ ಆಡಳಿತದಲ್ಲಿ ಜನರ ಬದುಕು ಹಸನಾಗುವುದಿರಲಿ ಸತ್ತರೂ ಸಂಸ್ಕಾರವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸ್ವಪಕ್ಷ ಸಚಿವ, ಶಾಸಕರೇ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ತಜ್ಞರ ಎಚ್ಚರಿಕೆ ಕಡೆಗಣಿಸಿ ಮುಂಜಾಗ್ರತೆ ವಹಿಸದೆ ಜನತೆಯನ್ನು ಸಾವಿನ ದವಡೆಗೆ ದೂಡಿದ್ದೂ ಅಲ್ಲದೇ ಈಗ ಲಸಿಕೆ ನೀಡುವಲ್ಲಿಯೂ ವಿಫಲವಾಗಿದೆ. ವಿಪಕ್ಷ ನಾಯಕರನ್ನು ಟೀಕೆ ಮಾಡಿದಾಕ್ಷಣ ಲೋಪ ಮುಚ್ಚಲಾಗದು ಎಂದು ಕಿಡಿಕಾರಿದೆ.