ಕೊರೊನಾದಿಂದ ನಮ್ಮನ್ನ ಪಾರು ಮಾಡೋಕೆ ವೈದ್ಯ ಲೋಕ ಎದುರಿಸುತ್ತಿರುವ ಸವಾಲುಗಳು ಒಂದೆರಡಲ್ಲ. ಸದ್ಯ ವೈದ್ಯ ಲೋಕದ ಸಿಬ್ಬಂದಿಯೇ ನಮ್ಮ ಪಾಲಿನ ದೇವರು ಎಂಬಂತಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ವೈದ್ಯಲೋಕ ಶ್ರಮಿಸುತ್ತಿದೆ.
ಇದೇ ರೀತಿ ಛತ್ತೀಸಗಢದ ಬಿಲಾಸಪುರ ರೈಲ್ವೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್ ಸ್ವಾತಿ ಎಂಬವರು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನ ಗಳಿಸುತ್ತಿದ್ದಾರೆ. ಇಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಯನ್ನ ನಡೆಸಲಾಗ್ತಿದೆ. ಇದರಲ್ಲಿ ಕೆಲ ಮೂಕ ಸೋಂಕಿತರೂ ಇದ್ದಾರೆ. ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸ್ವಾತಿ ಸೈನ್ ಲ್ಯಾಂಗ್ವೇಜ್ನ್ನು ಕಲಿತಿದ್ದಾರಂತೆ. ಸ್ವಾತಿ ಹಾಗೂ ಮೂಗ ಸೋಂಕಿತನ ನಡುವಿನ ಸಂಭಾಷಣೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೈಲ್ವೆ ಸಚಿವಾಲಯ ಕೂಡ ಈ ವಿಡಿಯೋವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
ಮೂಕ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ತಮಗೆ ರೋಗಿಗಳ ಜೊತೆ ಸಂಭಾಷಣೆ ನಡೆಸೋದು ಕಷ್ಟವಾಗ್ತಿದೆ ಅನ್ನೋದನ್ನ ಸ್ವಾತಿ ಅರಿತುಕೊಂಡರು. ಇದಾದ ಬಳಿಕ ಆನ್ಲೈನ್ ಕ್ಲಾಸ್ಗಳ ಸಹಾಯದಿಂದ ಕಷ್ಟಪಟ್ಟು ಈ ಸೈನ್ ಲ್ಯಾಂಗ್ವೇಜ್ನ್ನು ಕಲಿತಿದ್ದಾರೆ. ಈಗ ಸ್ವಾತಿಗೆ ರೋಗಿಗಳ ಜೊತೆ ಸಂಭಾಷಣೆ ನಡೆಸೋದು ಕಷ್ಟವೆನಿಸುತ್ತಿಲ್ಲವಂತೆ. ಈ ಪ್ರಯತ್ನದಿಂದ ಸ್ವಾತಿ ಕೇವಲ ದಿವ್ಯಾಂಗ ಸೋಂಕಿತರ ಮನಸ್ಸನ್ನ ಗೆಲ್ಲೋದು ಮಾತ್ರವಲ್ಲದೇ ಕೇಂದ್ರ ರೈಲ್ವೆ ಸಚಿವಾಲಯದ ಗಮನವನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಿಡಿಯೋವನ್ನ ಶೇರ್ ಮಾಡಿರುವ ರೈಲ್ವೆ ಸಚಿವಾಲಯ – ಮಾನವೀಯತೆ ಹಾಗೂ ಕರ್ತವ್ಯನಿಷ್ಠೆಗೆ ಇದೊಂದು ಸೂಕ್ತವಾದ ಉದಾಹರಣೆ. ಬಿಲಾಸಪುರದ ರೈಲ್ವೆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಮೂಗರನ್ನ ಮಾತನಾಡಿಸಲಿಕ್ಕಾಗಿ ನರ್ಸ್ ಸ್ವಾತಿ ಸೈನ್ ಲ್ಯಾಂಗ್ವೇಜ್ನ್ನು ಕಲಿತುಕೊಂಡಿದ್ದಾರೆ. ಇದರಿಂದ ರೋಗಿಗಳ ಕಷ್ಟ ಏನು ಅನ್ನೋದು ಸ್ವಾತಿಗೆ ಬೇಗನೆ ಅರ್ಥವಾಗುತ್ತಿದೆ. ಹಾಗೂ ಸ್ವಾತಿ ಕೂಡ ಆರಾಮಾಗಿ ರೋಗಿಗಳ ಸೇವೆಯನ್ನ ಮಾಡಬಹುದಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ.