ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಸಿಕೆಗಾಗಿ ಹಾಹಾಕಾರ ಉಂಟಾಗಿದೆ. ಲಸಿಕಾ ಕೇಂದ್ರಗಳ ಎದುರು ಜನರ ಉದ್ದನೆಯ ಸರತಿ ಸಾಲು ಕಂಡುಬಂದಿದೆ. ಲಸಿಕೆ ಕೊರತೆ ಪರಿಣಾಮ ನೂಕುನುಗ್ಗಲು ಉಂಟಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ನಿಗದಿತ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದೇ ಹಾಹಾಕಾರ ಉಂಟಾಗಿದೆ. ಬೆಡ್, ಆಕ್ಸಿಜನ್, ರೆಮ್ ಡೆಸಿವಿರ್ ಸಮಸ್ಯೆಯ ಬಳಿಕ ಈಗ ಲಸಿಕೆ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಅಭಯ ನೀಡಿದ್ದಾರೆ. ಆಸ್ಪತ್ರೆಯ ಎದುರು ಸಾಲುಗಟ್ಟಿ ನಿಲ್ಲದಂತೆ ಮನವಿ ಮಾಡಿದ್ದು, ಎಲ್ಲರಿಗೂ ಲಸಿಕೆ ಕೊಡುತ್ತೇವೆ ಆತಂಕ ಬಿಡಿ ಎಂದು ತಿಳಿಸಿದ್ದಾರೆ.
ಜನ ಲಸಿಕಾ ಕೇಂದ್ರಗಳು ಎದುರು ರಾತ್ರೋರಾತ್ರಿ ಸರತಿ ಸಾಲಿನಲ್ಲಿ ನಿಲ್ಲುವುದು ಸರಿಯಲ್ಲ. ಹಂತಹಂತವಾಗಿ ಲಸಿಕೆ ಪೂರೈಕೆಯಾಗುತ್ತಿದ್ದು, ಲಭ್ಯತೆ ಪ್ರಮಾಣಕ್ಕೆ ಅನುಸಾರ ಎಲ್ಲರಿಗೂ ಲಸಿಕೆ ನೀಡಲಾಗುವುದು. ಎರಡನೇ ಡೋಸ್ ಲಸಿಕೆ ನೀಡಲು ತೊಂದರೆ ಇಲ್ಲ. ಲಸಿಕೆ ಬರುತ್ತಿದ್ದಂತೆ ಎಲ್ಲರಿಗೂ ನೀಡಲಾಗುವುದು. ಜನ ಗಾಬರಿ ಪಡುವುದು ಬೇಡ ಎಂದು ಸಿಎಂ ತಿಳಿಸಿದ್ದಾರೆ.