ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯನ್ನ ನಿಯಂತ್ರಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ರಾಜ್ಯದ ಜನತೆಯ ಬಳಿ ಮೂರನೇ ಅಲೆಗೆ ಸಿದ್ಧರಾಗಿ ಎಂದು ಹೇಳ್ತಾರೆ. ಮೂರನೇ ಅಲೆಯ ಬಗ್ಗೆ ಮಾತನಾಡುವ ಮುನ್ನ 2ನೇ ಅಲೆಯನ್ನ ನಿಯಂತ್ರಿಸಿ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಕೊರೊನಾ 2ನೆ ಅಲೆ ಭೀಕರವಾಗಿದ್ದು ರಾಜ್ಯದ ಜನತೆಗೆ ಬೇಕಾದ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಸಿಗುತ್ತಿಲ್ಲ. ನೀವು ಮೊದಲು ವೈದ್ಯಕೀಯ ಆಮ್ಲಜನಕ ಎಲ್ಲಿ ಸಿಗುತ್ತೆ ಅಂತಾ ಬೋರ್ಡ್ ಹಾಕಿ. ಲಾಕ್ಡೌನ್ನಿಂದಾಗಿ ಹೊರಗಡೆ ತರಕಾರಿ ಕೊಳ್ಳುವವರೇ ಇಲ್ಲ ಎಂಬಂತಾಗಿದೆ. ಇದರಿಂದ ಬಡ ಜನತೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಈ ಸಂಕಷ್ಟದ ಸಂದರ್ಭದಲ್ಲಿ ಬಡ ಜನತೆಯ ಖಾತೆಗೆ 10 ಸಾವಿರ ರೂಪಾಯಿ ಹಾಕಬೇಕು ಎಂದು ಆಗ್ರಹಿಸಿದ್ರು.
ಇನ್ನು ಇದೇ ವೇಳೆ ಬೆಡ್ ಬ್ಲಾಕಿಂಗ್ ದಂಧೆ ಹೊರಗೆಳೆದ ಸಂಸದ ತೇಜಸ್ವಿ ಸೂರ್ಯ ವಿಚಾರವಾಗಿಯೂ ಮಾತನಾಡಿದ ಅವ್ರು, ತೇಜಸ್ವಿ ಸೂರ್ಯ ರಾಜ್ಯದ ಪಾಲಿಗೆ ವಿಷ ಬೀಜವಿದ್ದಂತೆ. ಇಂತಹ ವ್ಯಕ್ತಿ ಬಗ್ಗೆ ಏನು ಮಾತನಾಡೋದು..? ದಂಧೆ ಬಯಲಿಗೆಳೆಯುವ ವೇಳೆ ಅಧಿಕಾರಿ ಒಂದೇ ಸಮುದಾಯದ ಹೆಸರನ್ನ ಕೊಟ್ಟರಾ..? ತಮ್ಮ ತಪ್ಪನ್ನ ಮುಚ್ಚಲು ಅಧಿಕಾರಿಗಳ ಮೇಲೆ ಹಾಕುತ್ತಿದ್ದಾರೆ ಎಂದು ಹೇಳಿದ್ರು.