ಓಲಾ ಕ್ಯಾಬ್ ಸೇವೆಯ ಓಲಾ ಪ್ರತಿಷ್ಠಾನವು ಗಿವ್ ಇಂಡಿಯಾ ಪ್ರತಿಷ್ಠಾನದೊಂದಿಗೆ ಸೇರಿಕೊಂಡು ತನ್ನ ಗ್ರಾಹಕರಿಗೆ ಇನ್ನು ಮುಂದೆ ಆಮ್ಲಜನಕದ ಕಾನ್ಸಂಟ್ರೇಟರ್ಗಳನ್ನು ವಿತರಿಸಲು ನಿರ್ಧರಿಸಿದೆ. ಈ ಮೂಲಕ ಕೋವಿಡ್ನ ಎರಡನೇ ಅಲೆ ಸಂದರ್ಭದಲ್ಲಿ ಜನತೆಗೆ ರಿಲೀಫ್ ಕೊಡಲು ಮುಂದಾದ ಕಂಪನಿಗಳ ಪಟ್ಟಿಯನ್ನು ಓಲಾ ಸೇರಿಕೊಂಡಿದೆ.
ಓಲಾ ಅಪ್ಲಿಕೇಶನ್ ಮುಖಾಂತರ ಈ ಸೇವೆಯನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು ಇದೇ ವಾರದಿಂದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆರಂಭಗೊಳ್ಳಲಿದೆ. ಮೊದಲಿಗೆ ಆಮ್ಲಜನಕದ 500 ಕಾನ್ಸಂಟ್ರೇಟರ್ಗಳ ಮೂಲಕ ಈ ಸೇವೆಗೆ ಓಲಾ ಚಾಲನೆ ಕೊಡಲಿದೆ.
ಮುಂಬರುವ ದಿನಗಳಲ್ಲಿ ದೇಶಾದ್ಯಂತ 10000 ಕಾನ್ಸಂಟ್ರೇಟರ್ಗಳ ಮುಖಾಂತರ ಗ್ರಾಹಕರಿಗೆ ಈ ಸೇವೆ ಒದಗಿಸಲು ಓಲಾ ಹಾಗೂ ಗಿವ್ ಇಂಡಿಯಾ ನಿರ್ಧರಿಸಿವೆ.
ಎರಡು ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್, ಮದುವೆ ಸೇರಿ ಎಲ್ಲಾ ನಿಷೇಧ
ಓಲಾ ಅಪ್ಲಿಕೇಶನ್ ಮೂಲಕ ಗ್ರಾಹಕರು ಆಮ್ಲಜನಕದ ಕಾನ್ಸಂಟ್ರೇಟರ್ಗೆ ಮನವಿ ಸಲ್ಲಿಸಬಹುದು. ಒಮ್ಮೆ ಮನವಿ ಸಲ್ಲಿಕೆಯಾದ ಬಳಿಕ ಆ ಮನವಿಯನ್ನು ಮಾನ್ಯೀಕರಿಸಿ, ಬಳಿಕ ಓಲಾ ತನ್ನ ಕ್ಯಾಬ್ ಒಂದರ ಮೂಲಕ ವಿಶೇಷವಾಗಿ ತರಬೇತಿ ಪಡೆದ ಚಾಲಕನಿಂದ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಿದೆ.
ಒಮ್ಮೆ ರೋಗಿಯು ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದ ಬಳಿಕ ಖುದ್ದು ಓಲಾ ಅದನ್ನು ಮರಳಿ ಪಡೆದುಕೊಂಡು ಗಿವ್ ಇಂಡಿಯಾಗೆ ಮರಳಿಸಲಿದೆ. ಇದಾದ ಬಳಿಕ ಕಾನ್ಸಂಟ್ರೇಟರ್ ಅನ್ನು ಮತ್ತೊಬ್ಬ ಗ್ರಾಹಕನಿಗೆ ಕೊಡಬಹುದಾಗಿದೆ.