ಆಡಳಿತದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಮಂದಿ ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಅರಿತುಕೊಳ್ಳಲು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೇ ಮಾರುವೇಷದಲ್ಲಿ ಬಂದು ಹೋಗುತ್ತಿದ್ದ ಅನೇಕ ನಿದರ್ಶನಗಳನ್ನು ಕೇಳಿಕೊಂಡು ಬೆಳೆದಿದ್ದೇವೆ.
ಇಂಥದ್ದೇ ನಿದರ್ಶನಗಳನ್ನು ನೆನಪಿಸುವ ಘಟನೆಯೊಂದರಲ್ಲಿ ಪುಣೆಯ ಪಿಂಪ್ರಿ ಚಿಂಚ್ವಾಡ್ನ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅರಿಯಲು ಮಾರುವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಉದ್ದನೆಯ ಗಡ್ಡಧಾರಿಯಾಗಿ ಕುರ್ತಾದಲ್ಲಿ ಮುಸ್ಲಿಂ ಪಠಾಣ್ನ ಅವತಾರದಲ್ಲಿ ಕಾಣಿಸಿಕೊಂಡ ಪ್ರಕಾಶ್ ತಮ್ಮ ಕಿರಿಯ ಸಹೋದ್ಯೋಗಿ ಪ್ರೇರಣಾ ಕಟ್ಟೆರನ್ನು ಮಡದಿಯಂತೆ ಕಾಣಿಸಿ, ಖುದ್ದು ಠಾಣೆಗಳಿಗೆ ತೆರಳಿ ದೂರುಗಳನ್ನು ಕೊಡಲು ಮುಂದಾಗಿ ತಮ್ಮ ಇಲಾಖೆಯ ಸಿಬ್ಬಂದಿ ಯಾವ ಮಟ್ಟದಲ್ಲಿ ಕ್ಷಮತೆ ಹೊಂದಿದ್ದಾರೆ ಎಂದು ಪರೀಕ್ಷಿಸಿದ್ದಾರೆ.
ವೈದ್ಯನ ಸೋಗಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಣ್ಣು, ಐಸ್ ಕ್ರೀಮ್ ಮಾರಾಟಗಾರ ಅರೆಸ್ಟ್
ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಬೇರೆ ಬೇರೆ ರೀತಿಯ ದೂರುಗಳನ್ನು ಹೇಳಿಕೊಂಡು ತೆರಳಿದ ಪೊಲೀಸ್ ಆಯುಕ್ತರು ತಮಗೆ ಅಲ್ಲೆಲ್ಲಾ ಯಾವ ಮಟ್ಟದಲ್ಲಿ ಪ್ರತಿಕ್ರಿಯೆಗಳು ಸಿಗುತ್ತವೆ ಎಂದು ಪರಿಶೀಲಿಸಿದ್ದಾರೆ. ಹಿಂಜೇವಾಡಿ ಹಾಗೂ ವಾಕಡ್ನ ಠಾಣೆಗಳ ಸಿಬ್ಬಂದಿಯಿಂದ ಸಿಕ್ಕ ಪ್ರಕ್ರಿಯೆಗಳಿಂದ ಪ್ರಕಾಶ್ ಸಂತಸಗೊಂಡಿದ್ದಾರೆ.
ಮತ್ತೊಂದು ನಿದರ್ಶನದಲ್ಲಿ, ಕೋವಿಡ್-19 ಪಾಸಿಟಿವ್ ರೋಗಿಯೊಬ್ಬರನ್ನು ಕೊಂಡೊಯ್ಯಲು ಆಂಬುಲೆನ್ಸ್ ಚಾಲಕ ಮನಬಂದಂತೆ ದುಡ್ಡು ಕೇಳುತ್ತಿದ್ದಾನೆ ಎಂಬ ದೂರಿನೊಂದಿಗೆ ಹೋಗಿದ್ದ ವೇಳೆ, ಈ ವಿಚಾರದಲ್ಲಿ ತಾವೇನೂ ಮಾಡಲು ಬರುವುದಿಲ್ಲ ಎಂಬ ಪ್ರತಿಕ್ರಿಯೆ ಸಿಕ್ಕಿದೆ. ಬಳಿಕ ತಾವು ಪೊಲೀಸ್ ಆಯುಕ್ತ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟ ಪ್ರಕಾಶ್, ಈ ಸಂಬಂಧ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.