ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಅನೇಕ ಸಲಹೆ ನೀಡಿದ್ದಾರೆ.
ದುಡಿಯುವ ವರ್ಗಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದ್ದು, ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಇಲ್ಲೇ ಬಳಸಿಕೊಳ್ಳಬೇಕು. ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಸ್ಥಾಪನೆ ಮಾಡಬೇಕು. ಆಕ್ಸಿಜನ್ ಸಿಲಿಂಡರ್ ಮಾರಾಟ ದಂಧೆಗೆ ಕಡಿವಾಣ ಹಾಕಿ ಮನೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಆಕ್ಸಿಜನ್ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಡ್ ಅಗತ್ಯತೆ ಬಗ್ಗೆ ಮೊದಲೇ ಕಾರ್ಯೋನ್ಮುಖವಾಗಬೇಕು. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನಿವೃತ್ತ ವೈದ್ಯರನ್ನು ಕೋವಿಡ್ ಚಿಕಿತ್ಸೆಗೆ ನಿಯೋಜಿಸಬೇಕು ಎಂದು ಸಲಹೆ ನೀಡಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಲಾಗದವರಿಗೆ ಆದ್ಯತೆಯ ಮೇಲೆ ಲಸಿಕೆ ಹಾಕಬೇಕು. ಕಳೆದ ವರ್ಷ ಬಂದ ವೆಂಟಿಲೇಟರ್ ಧೂಳು ಹಿಡಿಯುತ್ತಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಕಲ್ಯಾಣಮಂದಿರ, ಕ್ರೀಡಾಂಗಣ, ಹಾಸ್ಟೆಲ್ ಮೊದಲಾದವುಗಳನ್ನು ತಾತ್ಕಾಲಿಕ ಆಸ್ಪತ್ರೆ ಮಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಖಾಲಿ ಜಾಗ ಹುಡುಕಿ ಅಂತ್ಯಕ್ರಿಯೆ ನಡೆಸಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ತಿಂಗಳಿಗೆ ಸ್ಥಳ 10 ಕೆಜಿ ಅಕ್ಕಿ ಜೊತೆಗೆ ಬೇಳೆ, ಅಡುಗೆ ಎಣ್ಣೆ ಮುಂತಾದ ರೇಷನ್ ಕೊಡಬೇಕು. ಪ್ರತಿ ಬಿಪಿಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ., ನಂತರ ತಿಂಗಳಿಗೆ 6 ಸಾವಿರ ರೂಪಾಯಿ ನೀಡಬೇಕು. ಚಾಲಕರಾಗಿ ದುಡಿಯುವ ವರ್ಗಕ್ಕೆ 10 ಸಾವಿರ ರೂಪಾಯಿ ಕೊಡಬೇಕು ಎಂದು ಸಿಎಂಗೆ ಪತ್ರ ಬರೆದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.