ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಚೈನ್ ಲಿಂಕ್ ಮುರಿಯಬೇಕೆಂದರೆ ಲಾಕ್ ಡೌನ್ ಅನಿವಾರ್ಯ. ಇಲ್ಲವಾದಲ್ಲಿ ಸಾವು-ನೋವುಗಳು ಹೆಚ್ಚಾಗುತ್ತವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರೋಗ್ಯ ಇಲಾಖೆ ಆರಂಭದಿಂದಲೂ ಲಾಕ್ ಡೌನ್ ಬಗ್ಗೆ ಪ್ರತಿಪಾದಿಸುತ್ತಿದೆ. ಸೋಂಕು ನಿಯಂತ್ರಣ ಮಾಡಬೇಕೆಂದರೆ ಸಾವು – ನೋವು ತಪ್ಪಿಸಬೇಕೆಂದರೆ ಲಾಕ್ ಡೌನ್ ಜಾರಿಮಾಡಬೇಕು ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜೊತೆಯೂ ಚರ್ಚೆ ನಡೆಸಲಾಗುವುದು. ಅಂತಿಮವಾಗಿ ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಕೋವಿಡ್ನಿಂದ ಬಳಲುತ್ತಿರುವವರಿಗೆ ಸೋಂಕಿತ ವಿದ್ಯಾರ್ಥಿಗಳಿಂದ ವಿಶೇಷ ಸಂದೇಶ
ಸ್ಥಳೀಯವಾಗಿಯೂ ಲಾಕ್ ಡೌನ್ ಬಗ್ಗೆ ಒತ್ತಡ ಕೇಳಿಬರುತ್ತಿದೆ. ಲಾಕ್ ಡೌನ್ ಮಾಡದಿದ್ದರೆ ಆರೋಗ್ಯ ಇಲಾಖೆ ಮೇಲೆ ಒತ್ತಡ ಹೆಚ್ಚಾಗಲಿದೆ ಮಾತ್ರವಲ್ಲ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಿದರೆ ಆರೋಗ್ಯ ಉಪಕರಣಗಳ ಸಮಸ್ಯೆ ಎದುರಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
ಈ ನಡುವೆ ಚಾಮರಾಜನಗರದಲ್ಲಿ ಮಾತನಾಡಿರುವ ಸಚಿವ ಸುರೇಶ್ ಕುಮಾರ್ ಕೂಡ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಕರ್ಫ್ಯೂ ಜಾರಿಯಾಗಿ 10 ದಿನಗಳಾದರೂ ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಲಾಕ್ ಡೌನ್ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವುದು ಬಹುತೇಕ ಖಚಿತವಾಗಿದೆ.