ನಿವೃತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೊರೊನಾ ಮಧ್ಯೆಯೇ ತಾತ್ಕಾಲಿಕ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ತಾತ್ಕಾಲಿಕ ಪಿಂಚಣಿ ಪಾವತಿಯನ್ನು ನಿವೃತ್ತಿಯ ದಿನಾಂಕದಿಂದ ಒಂದು ವರ್ಷದ ಅವಧಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
ಶಾಶ್ವತ ಪಿಂಚಣಿ ಆದೇಶ ಪಡೆಯುವವರೆಗೆ ತಾತ್ಕಾಲಿಕ ಪಿಂಚಣಿ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಹಿಂದಿನ ವರ್ಷ ಕೊರೊನಾ ಸಂದರ್ಭದಲ್ಲಿ ಸರ್ಕಾರ 6 ತಿಂಗಳ ಅವಧಿಗೆ ಈ ವ್ಯವಸ್ಥೆ ಮಾಡಿತ್ತು. ಈಗ ಅದನ್ನು ಒಂದು ವರ್ಷದವರೆಗೆ ವಿಸ್ತರಿಸಿದೆ. ಕೊರೊನಾ ಕಾರಣಕ್ಕಾಗಿ ನಿವೃತ್ತಿ ದಿನಾಂಕದಿಂದ ಒಂದು ವರ್ಷದವರೆಗೆ ತಾತ್ಕಾಲಿಕ ಪಿಂಚಣಿ ವ್ಯವಸ್ಥೆ ವಿಸ್ತರಿಸಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ತಾತ್ಕಾಲಿಕ ಪಿಂಚಣಿ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ ಎಂದಿದ್ದಾರೆ.
ನಿವೃತ್ತಿ ಹೊಂದಿರುವ ಕೆಲ ನೌಕರರು, ಪಿಂಚಣಿ ಜಾರಿಯಾಗುವ ಮೊದಲೇ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರು ಮರಣ ಪ್ರಮಾಣಪತ್ರ ಹಾಗೂ ಕೆಲ ದಾಖಲೆಗಳನ್ನು ನೀಡಿದಲ್ಲಿ ತಕ್ಷಣ ಪಿಂಚಣಿ ಜಾರಿಗೊಳಿಸಲಾಗುವುದು ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.