ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಶುಕ್ರವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅವರ ಸಂಪುಟಕ್ಕೆ ಹಿರಿಯ ನಾಯಕರಾದ ದುರೈಮುರುಗನ್, ಕೆ.ಎಂ. ನೆಹರು ಮತ್ತು ಎಂ. ಸುಬ್ರಮಣಿಯನ್ ಅವರು ಸೇರ್ಪಡೆಯಾಗಲಿದ್ದಾರೆ. 12 ಕ್ಕೂ ಅಧಿಕ ಮಂದಿ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವುದು ವಿಶೇಷವಾಗಿದೆ.
ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಲಿರುವ 34 ಮಂತ್ರಿಗಳ ಮಾಹಿತಿಯನ್ನು ನೀಡಲಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಗೃಹ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಆರೋಗ್ಯ ಖಾತೆಯನ್ನು ಸುಬ್ರಮಣೀಯನ್ ಅವರಿಗೆ ವಹಿಸಲಾಗಿದೆ.
ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲಿರುವ ಸ್ಟಾಲಿನ್ ಗೃಹ ಖಾತೆಯೊಂದಿಗೆ ಸಾರ್ವಜನಿಕ ಸಾಮಾನ್ಯ ಆಡಳಿತ, ಅಖಿಲ ಭಾರತ ಸೇವೆಗಳು, ವಿಶೇಷ ಕಾರ್ಯಕ್ರಮ ಅನುಷ್ಠಾನ, ವಿವಿಧ ಸಾಮರ್ಥ್ಯದ ವ್ಯಕ್ತಿಗಳ ಕಲ್ಯಾಣ ಸೇರಿದಂತೆ ಇತರೆ ಖಾತೆಗಳನ್ನು ಹೊಂದಿದ್ದಾರೆ.
2006 ರಿಂದ 11 ರವರೆಗೆ ಡಿಎಂಕೆ ಅಧಿಕಾರದ ಅವಧಿಯಲ್ಲಿ ಲೋಕೋಪಯೋಗಿ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದ ಪಕ್ಷದ ಹಿರಿಯ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ನೀರಾವರಿ ಯೋಜನೆಗಳ ಉಸ್ತುವಾರಿ, ಗಣಿ ಮತ್ತು ಖನಿಜ ಇಲಾಖೆ ಹಾಗೂ ಇತರೆ ಜಲಸಂಪನ್ಮೂಲ ಇಲಾಖೆ ನೋಡಿಕೊಳ್ಳಲಿದ್ದಾರೆ.
ಉತ್ತರ ಚೆನ್ನೈ ಪ್ರಬಲ ನಾಯಕ ಡಿ.ಕೆ. ಸೇಖರ ಬಾಬು ಮೊದಲ ಬಾರಿಗೆ ಮಂತ್ರಿಯಾಗಿದ್ದು ಅವರಿಗೆ ಧಾರ್ಮಿಕ ದತ್ತಿ ಖಾತೆ ನೀಡಲಾಗಿದೆ. ಮಾಜಿ ಹೂಡಿಕೆ ಬ್ಯಾಂಕರ್ ಪಳನಿವೇಲ್ ತ್ಯಾಗರಾಜನ್ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಅವರು ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
ಶಿಕ್ಷಣ ಸಚಿವರಾಗಿ ಅಂಬಿಲ್ ಮಹೇಶ್ ಪೊಯಮೋಳಿ ಅವರನ್ನು ನಿಯೋಜಿಸಲಾಗಿದೆ. ಅವರು ಕೂಡ ಮೊದಲ ಸಲ ಮಂತ್ರಿ ಆಗುತ್ತಿದ್ದಾರೆ. ತ್ಯಾಗರಾಜನ್ ಮತ್ತು ಅಂಬಿಲ್ ಮಹೇಶ್ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ನೇತೃತ್ವ ವಹಿಸಿದ ಪ್ರಮುಖ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರು ಡಿಎಂಕೆ ಪಕ್ಷಕ್ಕಾಗಿ ದೀರ್ಘಕಾಲ ಕೆಲಸ ಮಾಡಿದ್ದಾರೆ.
ಜಯಲಲಿತಾ ನೇತೃತ್ವದ ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ 2011 ರಿಂದ 15 ರವರೆಗೆ ಸಾರಿಗೆ ಸಚಿವರಾಗಿದ್ದ 2018ರಲ್ಲಿ ಡಿಎಂಕೆ ಸೇರಿದ ಸೆಂಥಿಲ್ ಬಾಲಾಜಿಗೆ ವಿದ್ಯುತ್ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ತಿರುಚನಾಪಳ್ಳಿಯ ಪಕ್ಷದ ಹಿರಿಯ ನಾಯಕ ಕೆಎಂ ನೆಹರು ಅವರಿಗೆ ಪುರಸಭೆ ಆಡಳಿತ ಖಾತೆ ನೀಡಲಾಗಿದೆ. ಹಿಂದೆ ಕಂದಾಯ ಸಚಿವರಾಗಿದ್ದ ಪೆರಿಯಸ್ವಾಮಿಯವರಿಗೆ ಸಹಕಾರ ಖಾತೆ ನೀಡಲಾಗಿದ್ದು, ಕೆ. ಪೊನ್ಮುಡಿ ತಾವು ಈ ಹಿಂದೆ ನಿರ್ವಹಿಸಿದ್ದ ಉನ್ನತ ಶಿಕ್ಷಣ ಇಲಾಖೆಯನ್ನು ಮರಳಿ ಪಡೆದಿದ್ದಾರೆ.
ಪಕ್ಷದ ಹಿರಿಯ ನಾಯಕ ಈ ಹಿಂದೆ ಆಹಾರ ಸಚಿವರಾಗಿದ್ದ ಇ.ವಿ. ವೇಲು ಅವರನ್ನು ಲೋಕೋಪಯೋಗಿ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಮತ್ತೊಬ್ಬ ನಾಯಕ ಎಂ.ಆರ್.ಕೆ ಪನ್ನೀರ್ ಸೆಲ್ವಂ ಕೃಷಿ ಮತ್ತು ಕಲ್ಯಾಣ ಸಚಿವರಾಗಲಿದ್ದಾರೆ. ಅನುಭವಿ ಮತ್ತು ಮಾಜಿ ಸಚಿವರಾದ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಅವರು ಕಂದಾಯ ಸಚಿವರಾಗಲಿದ್ದಾರೆ.
ಮಾಜಿ ಸಚಿವ ತಂಗಮ್ ತೆನ್ನರಾಸು ಮತ್ತು ಪರಿಸರ ಖಾತೆ ಮಾಜಿ ಮಂತ್ರಿ ಎಸ್. ರಘುಪತಿ ಕ್ರಮವಾಗಿ ಕೈಗಾರಿಕೆಗಳು ಮತ್ತು ಕಾನೂನು ಸಚಿವರಾಗಲಿದ್ದಾರೆ.
ಕೆ.ಆರ್.ಪರಿಯಾಕರುಪ್ಪನ್, ಟಿ.ಎಂ. ಅನ್ಬರಸನ್, ಸಂಸದ ಸಾಮಿನಾಥನ್ ಅವರು ಕ್ರಮವಾಗಿ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕೈಗಾರಿಕೆಗಳು ಮತ್ತು ಮಾಹಿತಿ ಮತ್ತು ಪ್ರಚಾರ ವಿಭಾಗ ಖಾತೆಗಳನ್ನು ನೀಡಲಾಗಿದೆ.
ಪಿ ಗೀತಾ ಜೀವನ್(ಮಾಜಿ ಸಚಿವೆ) ಅವರನ್ನು ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಸಚಿವರಾಗಿ ಆಯ್ಕೆ ಮಾಡಲಾಗಿದೆ. ಎಸ್.ಮುತ್ತುಸಾಮಿ(ವಸತಿ), ಅನಿತಾ ಆರ್. ರಾಧಾಕೃಷ್ಣನ್(ಮೀನುಗಾರಿಕೆ), ಎಸ್.ಆರ್. ರಾಜಕನ್ನಪ್ಪನ್(ಸಾರಿಗೆ), ಕೆ.ರಾಮಚಂದ್ರನ್(ಅರಣ್ಯ ಖಾತೆ) ಸಚಿವರಾಗಲಿದ್ದಾರೆ.
ಮಾಜಿ ಸಂಸದ ಸಿ.ವಿ. ಗಣೇಶನ್(ಕಾರ್ಮಿಕ ಕಲ್ಯಾಣ), ಟಿ. ಮನೋ ತಂಗರಾಜ್(ಮಾಹಿತಿ ತಂತ್ರಜ್ಞಾನ), ಎಂ. ಮಥಿವೆಂಥನ್(ಪ್ರವಾಸೋದ್ಯಮ) ಮತ್ತು ಎನ್. ಕಾಯಲ್ವಿಜಿ ಸೆಲ್ವರಾಜ್(ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಎಲ್. ಮುರುಗನ್ ಅವರನ್ನು ಧರಪುರಂ ವಿಭಾಗದಲ್ಲಿ 1,393 ಮತಗಳ ಅಂತರದಿಂದ ಸೋಲಿಸಿದರು) ಆದಿ ದ್ರಾವಿಡಾರ್ ಕಲ್ಯಾಣ ಮಂತ್ರಿಗಳಾಗಿದ್ದಾರೆ.
ಆರ್. ಸಕ್ಕರಪಾಣಿ(ಆಹಾರ), ಆರ್. ಗಾಂಧಿ(ಕೈಮಗ್ಗ ಮತ್ತು ಜವಳಿ), ಪಿ. ಮೂರ್ತಿ(ವಾಣಿಜ್ಯ ತೆರಿಗೆಗಳು), ಎಸ್.ಎಸ್. ಶಿವಶಂಕರ್(ಹಿಂದುಳಿದ ವರ್ಗಗಳ ಕಲ್ಯಾಣ), ಶಿವ ವಿ. ಮಯನಾಥನ್(ಪರಿಸರ), ಜಿಂಗಿ ಕೆ.ಎಸ್. ಮಸ್ತಾನ್ (ಅಲ್ಪಸಂಖ್ಯಾತರ ಕಲ್ಯಾಣ) ಮತ್ತು ಎಸ್.ಎಂ. ನಾಸರ್(ಡೈರಿ) ಮೊದಲ ಬಾರಿಗೆ ಸಚಿವರಾಗಲಿದ್ದಾರೆ.