ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಅಥವಾ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವವರಿಗೆ ಬೇಸರದ ಸುದ್ದಿಯೊಂದಿದೆ. ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳು ಆರೋಗ್ಯ ವಿಮೆ ಅಥವಾ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ವಿಮಾ ಕಂಪನಿಗಳು ನಿರಾಕರಿಸಬಹುದು. ಇಲ್ಲವೆ ಪಾಲಿಸಿ ಪಡೆಯಲು ನೀವು ತುಂಬಾ ಸಮಯ ಕಾಯಬೇಕಾಗುತ್ತದೆ.
ಸುದ್ದಿಯ ಪ್ರಕಾರ, ಜೀವ ವಿಮೆ ಮತ್ತು ಆರೋಗ್ಯ ವಿಮೆ ಕಂಪನಿಗಳು ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಸುಮಾರು 6 ತಿಂಗಳವರೆಗೆ ವಿಮೆ ಕಂಪನಿಗಳು ವಿಮೆ ನೀಡ್ತಿಲ್ಲ. ಕೊರೊನಾ ಎಷ್ಟು ದೀರ್ಘ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಕಂಪನಿಗಳಿಗೆ ಸ್ಪಷ್ಟತೆಯಿಲ್ಲ. ಇದೇ ಕಾರಣಕ್ಕೆ ಕಂಪನಿಗಳು ಬೇರೆ ಬೇರೆ ಅವಧಿಯನ್ನು ನಿಗದಿಪಡಿಸಿವೆ. ಕೆಲ ಕಂಪನಿಗಳು ಮೂರು ತಿಂಗಳು ಕಾಯುವಂತೆ ಸೂಚನೆ ನೀಡಿದ್ರೆ ಮತ್ತೆ ಕೆಲ ಕಂಪನಿಗಳು ಯಾವುದೇ ಸರಿಯಾದ ಸಮಯ ನೀಡ್ತಿಲ್ಲ.
ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳಿಗೆ ವಿಮೆ ಪಡೆಯುವುದು ಕಷ್ಟವಾಗಿದೆ. ವಿಮೆ ಪಾಲಿಸಿ ತೆಗೆದುಕೊಳ್ಳಲು ಹೋದಾಗ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಬೇಕಾಗುತ್ತದೆ. ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದ ಮಾಹಿತಿಯಿಂದ ಹಿಡಿದು ಕೊರೊನಾ ನಕಾರಾತ್ಮಕ ವರದಿಯನ್ನು ನೀಡಬೇಕು. ಫಾರ್ಮ್ ಭರ್ತಿ ಮಾಡಿದ ನಂತ್ರ ವಿಮೆ ಕಂಪನಿ ಸಿಬ್ಬಂದಿ ಮನೆಗೆ ಬಂದು ಹೆಚ್ಚಿನ ಮಾಹಿತಿ ಕೇಳಬಹುದು. ಕೆಲವು ಸಂದರ್ಭದಲ್ಲಿ ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿ ಪಾಲಿಸಿ ಪಡೆಯುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಎಲ್ಲ ಮಾಹಿತಿ ನಂತ್ರವೂ ವಿಮೆ ಕಂಪನಿ ಪಾಲಿಸಿ ನೀಡುವುದು ಅನುಮಾನ.