ಮೈಸೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಜನರ ಜೀವವನ್ನೇ ಹಿಂಡುತ್ತಿದೆ. ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಜನಪ್ರತಿನಿಧಿಗಳಿಂದ ಹಿಡಿದು ಆರೋಗ್ಯಾಧಿಕಾರಿಗಳಿಗೂ ತಮ್ಮ ಕುಟುಂಬ ಸದಸ್ಯರಿಗೇ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗದ ದುಸ್ಥಿತಿ ಎದುರಾಗಿದೆ. ಇನ್ನು ಸಾಮಾನ್ಯ ಸೋಂಕಿತರ ಸ್ಥಿತಿಯಂತು ಕೇಳುವವರೇ ಇಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯೇ ತಮ್ಮ ಪತ್ನಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗದೇ ಅಸಹಾಯಕತೆ ತೋಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊರೊನಾ ಸೋಂಕಿತರ ಸಂಬಂಧಿಯೊಬ್ಬರು ಮೈಸೂರು ಡಿ ಹೆಚ್ ಒ ಅಮರನಾಥ್ ಅವರಿಗೆ ಕರೆ ಮಾಡಿ ಬೆಡ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ವಾರ್ ರೂಂ ಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. ಆದರೆ ವಾರ್ ರೂಂ ಗೆ ಕರೆ ಮಾಡಿದರೆ ಯಾರೂ ಫೋನ್ ರಿಸೀವ್ ಮಾಡುತ್ತಿಲ್ಲ. ಒಂದು ಬೆಡ್ ವ್ಯವಸ್ಥೆ ಮಾಡಿಕೊಡುವಂತೆ ವ್ಯಕ್ತಿ ಗೋಗರೆದಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಡಿ ಹೆಚ್ ಒ ಬೆಡ್ ಗೂ ನನಗೂ ಸಂಬಂಧವಿಲ್ಲ. ನನಗೆ ಯಾರಿಗೂ ಬೆಡ್ ಕೊಡಿಸಲು ಸಾಧ್ಯವಿಲ್ಲ. ನನ್ನ ಪತ್ನಿಗೇ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನನ್ನ ಕೈ ಸೋತು ಹೋಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಗರಂ ಆದ ವ್ಯಕ್ತಿ. ಮತ್ಯಾಕೆ ಆರೋಗ್ಯಾಧಿಕಾರಿ ಜವಾಬ್ದಾರಿ? ಕೆಲಸವನ್ನು ಬಿಟ್ಟು ಹೋಗಿ ಎಂದು ಹೇಳಿದ್ದಾನೆ. ಇದಕ್ಕುತ್ತರಿಸಿರುವ ಆರೋಗ್ಯಾಧಿಕಾರಿ ನಾನು ಕೆಲಸವನ್ನು ಬಿಡಲು ಸಿದ್ಧನಿದ್ದೇನೆ. ನನ್ನ ಮೇಲೆ ಯಾವುದೇ ಕ್ರಮ ಕೈಗೊಂಡರೂ ಪರವಾಗಿಲ್ಲ ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ರೋಗಿಯ ಸಂಬಂಧಿ ನಡುವಿನ ಈ ಸಂಭಾಷಣೆ ಆಡಿಯೋ ಇದೀಗ ವೈರಲ್ ಆಗಿದೆ.