ಟಿಕ್ಟಾಕ್ನಲ್ಲಿ ಸಾಕಷ್ಟು ವಿಡಿಯೋಗಳು ಒಂದಿಲ್ಲೊಂದು ಕಾರಣದಿಂದ ವೈರಲ್ ಆಗ್ತಾನೇ ಇರುತ್ತದೆ. ಇದೇ ರೀತಿ ಕಾರೊಂದನ್ನ ಬಾಡಿಗೆ ಪಡೆದಿದ್ದ ವ್ಯಕ್ತಿಯೊಬ್ಬ ಅದನ್ನ ಹಿಂದಿರುಗಿಸಲು ತೆರಳಿದ್ದ ವೇಳೆ ಕಚೇರಿಗೆ ಬಂದ ಫೋನ್ ಕರೆಯನ್ನ ತಾನೇ ಸ್ವೀಕರಿಸಿದ್ದು ಈ ವಿಡಿಯೋವನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದಾರೆ.
ಬಾಡಿಗೆಗೆ ಕಾರನ್ನ ನೀಡುವ ಕಚೇರಿಗೆ ತೆರಳಿದ್ದ ಡೆರಿಕ್ ಕಾಹಿಲ್ ತಾವು ಬಾಡಿಗೆ ಪಡೆದಿದ್ದ ಕಾರನ್ನ ಹಿಂದಿರುಗಿಸುವವರಿದ್ದರು. ಇದಕ್ಕಾಗಿ ಕಾಯುತ್ತಿದ್ದ ವೇಳೆ ಸತತ 15 ನಿಮಿಷಗಳಿಂದ ಆಫೀಸಿನ ಫೋನಿಗೆ ನಿರಂತರ ಕರೆಯೊಂದು ಬರುತ್ತಲೇ ಇತ್ತು. ಫೋನ್ ರಿಂಗ್ ಕೇಳಿ ಕೇಳಿ ಸುಸ್ತಾಗಿದ್ದ ಡೆರಿಕ್ ಕೊನೆಗೆ ತಾನೇ ಈ ಕರೆಯನ್ನ ಸ್ವೀಕರಿಸಿದ್ದಾರೆ. ಹಾಗೂ ಗ್ರಾಹಕನೊಂದಿಗೆ ಸಂಭಾಷಣೆ ನಡೆಸಿದ್ದಾರೆ.
ನಾನು ಕಳೆದ 15 ನಿಮಿಷಗಳಿಂದ ಕಾರನ್ನ ಹಿಂದಿರುಗಿಸಬೇಕು ಎಂದು ಕಾಯುತ್ತಿದ್ದೆ. ಅಲ್ಲಿದ್ದ ವ್ಯಕ್ತಿ ಕರೆಯನ್ನ ಸ್ವೀಕರಿಸಲು ನಿರಾಕರಿಸುತ್ತಿದ್ದ ಹೀಗಾಗಿ ನಾನೇ ಫೋನ್ ಕರೆಯನ್ನ ಸ್ವೀಕರಿಸಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಕರೆಯನ್ನ ಸ್ವೀಕರಿಸಿದ ಡೆರಿಕ್, ಎಂಟರ್ಪ್ರೈಸಸ್ಗೆ ಕರೆ ಮಾಡಿದ್ದಕ್ಕಾಗಿ ಧನ್ಯವಾದಗಳು.ನಾನಿದನ್ನ ಪರಿಶೀಲನೆ ನಡೆಸುವೆ ಎಂದು ಹೇಳಿದ್ದಾರೆ.
ಇದಾದ ಬಳಿಕ ಆಫೀಸಿನ ಸಿಬ್ಬಂದಿ ಮೇಲೆ ಡೆರಿಕ್ ಆಕ್ರೋಶ ಹೊರಹಾಕೋದನ್ನ ನೀವು ಕಾಣಬಹುದಾಗಿದೆ. ನಿಮ್ಮಲ್ಲಿ ಮಿನಿವ್ಯಾನ್ ಸೌಲಭ್ಯ ಇದೆಯೇ ಎಂದು ಡೆರಿಕ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಆಕ್ರೋಶದಿಂದಲೇ ಉತ್ತರ ನೀಡಿದ ಸಿಬ್ಬಂದಿ ನಮ್ಮಲ್ಲಿ ಮಿನಿವ್ಯಾನ್ ಕೊರತೆ ಇದೆ ಎಂದು ಹೇಳಿದ್ದಾರೆ. ಇದಾದ ಬಳಿಕ ಡೆರಿಕ್ ಎಸ್ಯುವಿಯಂತಹ ಮಧ್ಯಮ ಗಾತ್ರದ ವಾಹನ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದಾದ ಬಳಿಕ ಗ್ರಾಹಕನಿಗೆ ಉತ್ತರ ನೀಡಿದ ಡೆರಿಕ್, ನಿಮಗೆ ಇದು ವಿಚಿತ್ರ ಎನಿಸಬಹುದು. ಆದರೆ ನಾನು ಇಲ್ಲಿ ಕೆಲಸ ಮಾಡುವವನಲ್ಲ. 10 ನಿಮಿಷದಿಂದ ಫೋನು ರಿಂಗಣಿಸುತ್ತಿದ್ದರೂ ಸಹ ಯಾರೂ ಕರೆಯನ್ನ ಸ್ವೀಕರಿಸಲು ತಯಾರಿರಲಿಲ್ಲ. ಹೀಗಾಗಿ ನಾನೇ ಕರೆಯನ್ನ ಸ್ವೀಕರಿಸಿದೆ. ಈಗ ಅವನಿಗೆ ಕೆಲಸ ನೀಡಿದ್ದೇನೆ. ಆತ ಪರಿಶೀಲನೆ ನಡೆಸಿ ನಿಮಗೆ ಮಾಹಿತಿ ನೀಡಲಿದ್ದಾನೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು 4 ಮಿಲಿಯನ್ಗೂ ಅಧಿಕ ಲೈಕ್ಸ್ ಸಂಪಾದಿಸಿದೆ.