ದೇಶದ ದೊಡ್ಡ ದೊಡ್ಡ ನಗರಗಳೇ ಕೋವಿಡ್ ಸಾಂಕ್ರಮಿಕದಿಂದ ತತ್ತರಿಸಿ ಹೋಗಿದ್ದರೆ, ಇತ್ತ ಗುಜರಾತ್‌ನ ಕಛ್ ಜಿಲ್ಲೆಯ ಮೋಟಾ ಅಂಗಿಯಾ ಎಂಬ ಗ್ರಾಮವೊಂದು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತೋರಿಸಿಕೊಡುತ್ತಿದೆ.
ನಾಲ್ಕು ಸಕ್ರಿಯ ಕೋವಿಡ್ ಪ್ರಕರಣಗಳು ಇರುವ ಈ ಊರಿನಲ್ಲಿ ಸಾಂಕ್ರಮಿಕವು ಎಲ್ಲೆಂದರಲ್ಲಿ ಹಬ್ಬದಂತೆ ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಖತ್ರಾನಾ ತಾಲ್ಲೂಕು ಕೇಂದ್ರದಿಂದ 5 ಕಿಮೀ ದೂರದಲ್ಲಿ ಇರುವ ಈ ಊರಿನಲ್ಲಿ ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ತೆಗೆದುಕೊಂಡ ಕುಟುಂಬಗಳಿಗೆ 2021-22ರ ವಿತ್ತೀಯ ವರ್ಷದ ಪಂಚಾಯತ್ ರಾಜ್ ತೆರಿಗೆ ಮೇಲೆ 100% ವಿನಾಯಿತಿ ಘೋಷಿಸಲಾಗಿದೆ. ಇದರ ಜೊತೆಗೆ 45 ವರ್ಷ ವಯಸ್ಸಿನ ಮೇಲ್ಪಟ್ಟ ಮಂದಿಯ ಪೈಕಿ 60%ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ.
ಪಂಚಾಯಿತಿ ತೆರಿಗೆಯಲ್ಲಿ ನೀರು, ಆಸ್ತಿ, ನೈರ್ಮಲ್ಯ ಹಾಗೂ ಬೀದಿ ದೀಪಗಳ ಮೇಲಿನ ತೆರಿಗೆಗಳೂ ಸೇರಿದ್ದು ಪ್ರತಿ ಕುಟುಂಬದ ಮೇಲೆ ವಾರ್ಷಿಕ 700 ರೂ.ಗಳು ಬೀಳುತ್ತದೆ.
“ನಾವು ಮುಂದಿನ ಮೂರು ತಿಂಗಳುಗಳ ಮಟ್ಟಿಗೆ ಕೋವಿಡ್ ವಿರುದ್ಧ ಹೋರಾಡಲು ಮುಂಗಡ ಯೋಜನೆಗಳನ್ನು ಮಾಡಿಕೊಂಡಿದ್ದು, ಒಂದು ವೇಳೆ ಹೆಚ್ಚು ಮಂದಿ ಕೋವಿಡ್ ಸೋಂಕಿಗೆ ಪೀಡಿತರಾದಲ್ಲಿ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದೇವೆ. ಅದಾಗಲೇ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್ ಮಾಡುವ ಮೂಲಕ ಸಾಂಕ್ರಮಿಕ ಹಬ್ಬುವುದನ್ನು ತಡೆಗಟ್ಟಲು ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಊರಿನ ಸರ್ಪಂಚ್ ಇಕ್ಬಾಲ್ ಘಾಂಚಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಾರದಲ್ಲಿ ಒಂದು ದಿನ ಮಾತ್ರ ವರ್ಕ್ ಆಗುತ್ತೆ ಈ ಆಪ್…!
55 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಮದ್ದುಗಳನ್ನು ಸಂಗ್ರಹ ಮಾಡಿಕೊಳ್ಳಲು ಊರಿನಲ್ಲಿ ಯುವಕರ ತಂಡವೊಂದು ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಪಕ್ಕದ ಭುಜ್ ಅಥವಾ ನಖಾತ್ರಾನಾ ಪಟ್ಟಣಗಳಿಂದ ಔಷಧಿಗಳನ್ನು ತರಿಸಿಕೊಳ್ಳಲು ರೋಗಿಗಳಿಗೆ ಇದಕ್ಕೆಂದೇ ಮೊಬೈಲ್ ಸಂಖ್ಯೆಯೊಂದನ್ನು ಕೊಡಲಾಗಿದೆ.
ಸೋಂಕು ಪೀಡಿತರಾದ ಮಂದಿಗೆ ಟಿಫಿನ್ ಸೇವೆಯನ್ನು ಸಹ ಒದಗಿಸಲು ಯೋಜನೆಗಳನ್ನು ಮಾಡಿಕೊಂಡಿದ್ದು, ಅದಾಗಲೇ ಈ ನಿಟ್ಟಿನಲ್ಲಿ ಅಡುಗೆ ಮನೆಯೊಂದು ಕಾರ್ಯನಿರ್ವಹಿಸುತ್ತಿದೆ. ಇದಕ್ಕೆಲ್ಲಾ ಯಾವುದೇ ದೇಣಿಗೆಗಳನ್ನು ಕೇಳದೇ ಪಂಚಾಯತ್ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.
ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯನ್ನು ಮನಗಂಡ ಗ್ರಾಮವು ತನ್ನದೇ ಆದ ಕೋವಿಡ್ ಆರೈಕೆ ಕೇಂದ್ರವೊಂದನ್ನು ಸ್ಥಾಪಿಸಲು ಮುಂದಾಗಿದ್ದು, 15 ಹಾಸಿಗೆಗಳ ಸಾಮರ್ಥ್ಯದ ಈ ಕೇಂದ್ರವನ್ನು ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ವಹಣೆ ಮಾಡಲಿದ್ದಾರೆ.