ಮಂಡ್ಯ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇದು ರಾಜ್ಯ ಸರ್ಕಾರದ ತಪ್ಪಿನಿಂದ ಸಂಭವಿಸಿದ ದುರಂತ. ಘಟನೆ ಬಗ್ಗೆ ತನಿಖೆ ಮಾಡಿ ಏನು ಪ್ರಯೋಜನ ಸರ್ಕಾರದ್ದೇ ತಪ್ಪಿರುವಾಗ ಶಿಕ್ಷೆ ಯಾರಿಗೆ ಕೊಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ತಪ್ಪು ಮಾಡಿದೆ ಆದರೆ ಬೆಂಕಿ ಬಿದ್ದ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬಾರದು. ಆಕ್ಸಿಜನ್ ಕೊರತೆ ಇದೆ ಎಂಬುದನ್ನು ಆರೋಗ್ಯ ಸಚಿವರೇ ಹೇಳುತ್ತಿದ್ದಾರೆ. ಚಾಮರಾಜನಗರ ದುರಂತ ಮರೆಮಾಚಲು ಈಗ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಹೊರತರಲಾಗುತ್ತಿದೆ. ಅಸಲಿಗೆ ಬೆಡ್ ಬ್ಲಾಕಿಂಗ್ ದಂಧೆ ಎಂಬುದೇ ಡ್ರಾಮಾ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮತ್ತೊಂದು ಆಕ್ಸಿಜನ್ ದುರಂತ; ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರ ದುರ್ಮರಣ
ಇನ್ನು ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಆ ಮಹಿಳೆಯನ್ನು ನೇಮಕ ಮಾಡಿದ್ದು ಯಾರು ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಕುಮಾರಸ್ವಾಮಿ, ವಿಶ್ವಗುರು ಆಗಬೇಕು ಎಂದು ನಮ್ಮಲ್ಲಿ ಉತ್ಪಾದನೆಯಾಗಿದ್ದ ಲಸಿಕೆಯನ್ನು ಬೇರೆಯವರಿಗೆ ಹಂಚಿದ್ದು ತಪ್ಪು. ದೇಶದಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಾಗ, ಲಸಿಕೆ ಕೊರತೆ ಆರಂಭವಾಗುತ್ತಿದ್ದಾಗ ಬೇರೆಯವರಿಗೆ ಲಸಿಕೆ ಕೊಟ್ಟಿದ್ದೇಕೆ? ಮಾರ್ಚ್ ನಲ್ಲಿಯೇ ಲಾಕ್ ಡೌನ್ ಮಾಡಿದ್ದರೆ ಇಂದು ಇಷ್ಟು ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದರು.