ನವದೆಹಲಿ: ಮುಂದಿನ ಎರಡು ತಿಂಗಳ ಕಾಲ ದೆಹಲಿಯ ಪಡಿತರ ಕಾರ್ಡುದಾರರಿಗೆ ಉಚಿತವಾಗಿ ರೇಷನ್ ನೀಡಲಾಗುವುದು ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ.
ರಾಷ್ಟ್ರರಾಜಧಾನಿಯ ಸುಮಾರು 72 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆಟೋಗಳು, ಇ –ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಆರ್ಥಿಕ ನೆರವು ನೀಡಲು ಯೋಜಿಸಲಾಗಿದೆ. ಚಾಲಕರ ಅಗತ್ಯತೆ ಪೂರೈಕೆಗೆ ನೆರವಾಗಲು ಸರ್ಕಾರ ತಲಾ 5 ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು ತಿಳಿಸಿದ್ದಾರೆ.
ದೆಹಲಿಯಲ್ಲಿ ಪಡಿತರ ಚೀಟಿ ಹೊಂದಿದವರಿಗೆ ಮುಂದಿನ ಎರಡು ತಿಂಗಳು ಉಚಿತ ಪಡಿತರ ನೀಡಲು ನಿರ್ಧರಿಸಲಾಗಿದೆ. ಇನ್ನೂ ಎರಡು ತಿಂಗಳು ಲಾಕ್ ಡೌನ್ ಮುಂದುವರೆಯುತ್ತದೆ ಎಂದು ಇದರ ಅರ್ಥವಲ್ಲ. ಬಡವರಿಗೆ ನೆರವಾಗುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ. ಬಡವರು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ 2 ತಿಂಗಳು ಪಡಿತರ ಮತ್ತು ಚಾಲಕರಿಗೆ ಒಂದು ಸಲ 5 ಸಾವಿರ ರೂ ನೀಡಲಾಗುವುದು ಎಂದು ತಿಳಿಸಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ತಡೆಗೆ ಕಳೆದ 15 ದಿನಗಳಿಂದ ಕಠಿಣ ನಿರ್ಬಂಧ ಜಾರಿಯಲ್ಲಿದೆ. ಎರಡು ತಿಂಗಳು ಉಚಿತ ಪಡಿತರ ನೀಡುವುದರಿಂದ ಕಠಿಣ ನಿರ್ಬಂಧ ಮುಂದುವರೆಯಬಹುದೆಂದು ಹೇಳಲಾಗಿದೆ.