ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ನೌಕರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ವಾರದಲ್ಲಿ ನಾಲ್ಕು ದಿನ ಮಾತ್ರ ನೌಕರರು ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಮೇಲ್ ಒಂದನ್ನು ಕಂಪನಿ ನೌಕರರಿಗೆ ಕಳುಹಿಸಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಮೇ ತಿಂಗಳಿನಲ್ಲಿ ನೌಕರರು ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಲಿದ್ದಾರೆ. ಉಳಿದ ಮೂರು ದಿನ ಅವರಿಗೆ ರಜೆ ಇರಲಿದೆ. ಈ ಬಗ್ಗೆ ಸ್ವಿಗ್ಗಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಗಿರೀಶ್ ಮೆನನ್ ಮಾಹಿತಿ ನೀಡಿದ್ದಾರೆ. ಸ್ವಿಗ್ಗಿ ಸಿಬ್ಬಂದಿ ಈ ಸಂದರ್ಭದಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ಕಂಪನಿ ಗೌರವಿಸುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ಮೇ ತಿಂಗಳಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ ನೀಡಲು ನಿರ್ಧರಿಸಿದ್ದೇವೆಂದು ಅವರು ಹೇಳಿದ್ದಾರೆ.
ವಾರದಲ್ಲಿ ಯಾವ ನಾಲ್ಕು ದಿನ ಕೆಲಸ ಮಾಡುತ್ತೇವೆಂಬುದನ್ನು ನೌಕರರು ನಿರ್ಧರಿಸಬೇಕು. ಉಳಿದ ಮೂರು ದಿನ ಕುಟುಂಬಸ್ಥರು ಹಾಗೂ ಸಂಬಂಧಿಕರ ಆರೈಕೆ ಮಾಡಲು ಅವಕಾಶ ನೀಡುತ್ತಿದ್ದೇವೆ. ನೌಕರರ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಇಷ್ಟೇ ಅಲ್ಲ ಸ್ವಿಗ್ಗಿ ನೌಕರರಿಗೆ ಕೊರೊನಾ ಖರ್ಚನ್ನು ಕಂಪನಿ ನೀಡ್ತಿದೆ. ಕುಟುಂಬಸ್ಥರ ಆಸ್ಪತ್ರೆ ವೆಚ್ಚವನ್ನೂ ಕಂಪನಿ ಭರಿಸಲಿದೆ.