ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಮಿತಿಮೀರಿದೆ. ಸೂಕ್ತ ಸಮಯದಲ್ಲಿ ಪ್ರಾಣವಾಯು ಸಿಗದೇ ಈಗಾಗಲೇ ಅನೇಕರು ಜೀವ ತೆತ್ತಿದ್ದಾರೆ.
ಚಾಮರಾಜನಗರ ಹಾಗೂ ಕಲಬರುಗಿಯ ಘಟನೆಗಳು ಇನ್ನೂ ಜೀವಂತವಾಗಿರುವ ಬೆನ್ನಲ್ಲೇ ಬೆಳಗಾವಿಯಲ್ಲೂ ಇಂತದ್ದೇ ದಾರುಣ ಘಟನೆ ವರದಿಯಾಗಿದೆ.
ಬೆಳಗಾವಿಯಲ್ಲಿ ಆಂಬುಲೆನ್ಸ್ ಚಾಲಕನಾಗಿರುವ ಶಿವಾನಂದ, ಜಿಲ್ಲೆಯ ಕರಾಳತೆಯನ್ನ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದ ಕಾರಣ ಆಂಬುಲೆನ್ಸ್ನಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇನ್ನೊಂದು ರೋಗಿಯೂ ಆಂಬುಲೆನ್ಸ್ನಲ್ಲೇ ಇದ್ದು ಇವರಿಗೂ ಆಮ್ಲಜನಕ ಸಿಗದೇ ಹೋದಲ್ಲಿ ಕೆಲವೇ ಕ್ಷಣಗಳಲ್ಲಿ ಸಾಯಲಿದ್ದಾರೆ ಎಂದು ಹೇಳಿದ್ರು.
ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಬೆಡ್ ಸಿಗುತ್ತಿದೆ. ದುಡ್ಡಿಲ್ಲದವರು ಆಕ್ಸಿಜನ್ ಸಿಗದೇ ಆಂಬುಲೆನ್ಸ್ನಲ್ಲೇ ಸಾಯುತ್ತಿದ್ದಾರೆ . ಹಣ ನೀಡಿದ್ರೆ ಮಾತ್ರ ದಲ್ಲಾಳಿಗಳ ಮೂಲಕ ಬೆಡ್ ವ್ಯವಸ್ಥೆ ಮಾಡಿಕೊಡ್ತಾರೆ. ನಾನು ಜಿಲ್ಲಾಸ್ಪತ್ರೆ ಎದುರು ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲೂ ಆಕ್ಸಿಜನ್ ಸಿಗದ ಕಾರಣಕ್ಕೂ ಬರೋಬ್ಬರಿ 23 ಮಂದಿ ಸಾವಿಗೀಡಾಗಿದ್ದರು. ಇದಾದ ಬಳಿಕ ಇಂದು ಬೆಳಗ್ಗೆಯಷ್ಟೇ ಕಲಬುರಗಿ ಜಿಲ್ಲೆಯ ಅಫಜಲ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ವೈದ್ಯಕೀಯ ಆಮ್ಲಜನಕ ಸಿಗದೇ ಮೃತಪಟ್ಟಿದ್ದರು.