ನವದೆಹಲಿ: ವಸತಿ ದಾಖಲಾತಿ ಇಲ್ಲದ ಕಾರಣಕ್ಕೆ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದೇಶಾದ್ಯಂತ ಕೊರೋನಾ ಎರಡನೆಯ ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ದಾಖಲೆ ಇಲ್ಲದವರಿಗೆ ಚಿಕಿತ್ಸೆ ನಿರಾಕರಿಸಬಾರದು. ಆಸ್ಪತ್ರೆ ದಾಖಲಾತಿ ಕುರಿತಂತೆ ಎರಡು ವಾರದೊಳಗೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸ್ಥಳೀಯ ವಸತಿ ದಾಖಲಾತಿ ಇಲ್ಲದ ಕಾರಣಕ್ಕೆ ಯಾವುದೇ ರೋಗಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಬಾರದು. ಅಗತ್ಯ ಔಷಧಿ ನೀಡಲು ನಿರಾಕರಿಸಬಾರದು ಎಂದು ಹೇಳಲಾಗಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಲ್. ನಾಗೇಶ್ವರರಾವ್ ಹಾಗೂ ರವೀಂದ್ರ ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ. ಯಾವುದೇ ವ್ಯಕ್ತಿಗಳು ಜಾಲತಾಣಗಳಲ್ಲಿ ಸಹಾಯ ಯಾಚಿಸಿದರೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗುವುದು ದಬ್ಬಾಳಿಕೆಯಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನೆರವು ಕೇಳುವ ವ್ಯಕ್ತಿಗಳ ಪೋಸ್ಟ್ ಗೆ ನಿರ್ಬಂಧ ಹೇರುವುದು ಅವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ದಬ್ಬಾಳಿಕೆ ನಡೆಸಿದರೆ ಕೋರ್ಟ್ ಮಧ್ಯ ಪ್ರವೇಶಿಸುತ್ತದೆ ಎಂದು ಹೇಳಲಾಗಿದೆ.
ದೇಶದ ಎಲ್ಲಾ ಜಿಲ್ಲಾ ದಂಡಾಧಿಕಾರಿಗಳು ಮತ್ತು ಮ್ಯಾಜಿಸ್ಟ್ರೇಟರ್ ಗಳಿಗೆ ಆದೇಶದ ಪ್ರತಿ ತಲುಪಿಸಲು ತಿಳಿಸಲಾಗಿದ್ದು ಯಾರಿಗೂ ಚಿಕಿತ್ಸೆ ನಿರಾಕರಿಸದೆ ಎಲ್ಲರಿಗೂ ವ್ಯವಸ್ಥೆ ಮಾಡಬೇಕೆಂದು ಹೇಳಲಾಗಿದೆ.