ನವದೆಹಲಿ: ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು. ಎಲ್ಲಾ ಆಸ್ಪತ್ರೆಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು 13 ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ತೀವ್ರಗೊಂಡಿದ್ದು, ಸರ್ಕಾರ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜೊತೆಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು ಎಂದು ನಾಯಕರು ಆಗ್ರಹಿಸಿದ್ದಾರೆ. ಲಸಿಕೆ ನೀಡುವ ಉದ್ದೇಶದಿಂದ ಬಜೆಟ್ ನಲ್ಲಿ 35 ಸಾವಿರ ಕೋಟಿ ರೂಪಾಯಿ ಘೋಷಿಸಿದ್ದು, ಈ ಹಣವನ್ನು ಬಳಸಿಕೊಂಡು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಜಂಟಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಬಿಎಸ್ಪಿ ನಾಯಕಿ ಮಾಯಾವತಿ, ಸೀತಾರಾಮ್ ಯೆಚೂರಿ, ಹೇಮಂತ್ ಸೊರೆನ್ ಸೇರಿದಂತೆ ಹಲವು ನಾಯಕರು ಉಚಿತ ಲಸಿಕೆ ನೀಡಬೇಕೆಂದು ಆಗ್ರಹಿಸಿ ಹೇಳಿಕೆ ನೀಡಿದ್ದಾರೆ.