ರಾಜ್ಯದಲ್ಲಿ ಕೊರೊನಾ ಸೋಂಕು ಅಬ್ಬರ ತೀವ್ರವಾಗಿದ್ದು, ಸೋಂಕು ತಡೆಗೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಪಡಿತರ ಚೀಟಿದಾರರು ಸರಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಸರ್ಕಾರದಿಂದ ಪಡಿತರ ಸರಬರಾಜು ಆಗಿದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಇಲಾಖೆ ಸರ್ವರ್ ಸಮಸ್ಯೆಯಿಂದ ಮತ್ತು ಇಂಟರ್ನೆಟ್ ಪದೇ ಪದೇ ಕೈ ಕೊಡುತ್ತಿರುವುದರಿಂದ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ಸಂಜೆಯವರೆಗೂ ಕಾದು ಸುಸ್ತಾದ ಜನ ವಾಪಸ್ ಮರಳುವಂತಾಗಿದೆ.
ಪಡಿತರ ವಿತರಣೆಗಾಗಿ ಬಯೋಮೆಟ್ರಿಕ್ ಮತ್ತು ಮೊಬೈಲ್ ಒಟಿಪಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಬಯೋಮೆಟ್ರಿಕ್ ನಲ್ಲಿ ಎಲ್ಲಾ ಗ್ರಾಹಕರು ಬೆರಳಚ್ಚು ಒತ್ತಿದರೆ ಕೊರೊನಾ ಸೋಂಕು ಹರಡುವ ಅಪಾಯ ಎದುರಾಗಿದೆ. ಅಲ್ಲದೆ, ಕೆಲವರು ಆಧಾರ್ ಲಿಂಕ್ ಮಾಡಿದ್ದು ಅವರ ಮೊಬೈಲ್ ಗೆ ರೇಷನ್ ಪಡೆಯಲು ಒಟಿಪಿ ಕಳುಹಿಸುವ ಮೂಲಕ ಪಡಿತರ ವಿತರಿಸಲಾಗುತ್ತದೆ.
ಗ್ರಾಮಾಂತರ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಮೊಬೈಲ್ ಗೆ ಒಟಿಪಿ ಬರುವುದಿಲ್ಲ. ಕೆಲವರು ಗೊತ್ತಿಲ್ಲದೆ ರೇಷನ್ ಗಾಗಿ ಆಧಾರ್ ಲಿಂಕ್ ಮಾಡಿದ ಮೊಬೈಲ್ ನಂಬರ್ ಬದಲಿಸಿಕೊಂಡಿರುವುದರಿಂದಲೂ ಸಮಸ್ಯೆಯಾಗಿದೆ. ಮಲೆನಾಡು, ಗ್ರಾಮೀಣ ಪ್ರದೇಶ ಸೇರಿದಂತೆ ಹಲವೆಡೆ ಇಂಟರ್ನೆಟ್ ಸಂಪರ್ಕ ಕಡಿತವಾಗುವುದರಿಂದ ಸರಿಯಾಗಿ ರೇಷನ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಹಾರ ಇಲಾಖೆಯ ಸರ್ವರ್ ಸಮಸ್ಯೆ ಕೂಡ ಇರುವುದರಿಂದ ಪಡಿತರ ಚೀಟಿದಾರರು ಪಡಿತರ ಪಡೆದುಕೊಳ್ಳಲು ಹರಸಾಹಸ ನಡೆಸುವಂತಾಗಿದೆ ಎಂದು ಹೇಳಲಾಗಿದೆ.