ವಿದ್ಯುತ್ ಕೈಕೊಟ್ಟ ಪರಿಣಾಮ ಆಕ್ಸಿಜನ್ ಸ್ಥಗಿತಗೊಂಡು ಕೊರೊನಾ ಸೋಂಕಿತ ಶಿಕ್ಷಕ ಪ್ರಾಣಬಿಟ್ಟ ಘಟನೆ ಯಾದಗಿರಿ ತಾಲೂಕಿನ ಮುದ್ನಾಳ್ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೊನಾ ಸೋಂಕು ತಗಲಿದ ಶಿಕ್ಷಕ ನರಳಾಡಿ ಜೀವ ಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ಕೈ ಕೊಟ್ಟಿದ್ದು ಕತ್ತಲಲ್ಲೇ ಬಟ್ಟೆಯಿಂದ ಸೋಂಕಿತರಿಗೆ ಗಾಳಿ ಬೀಸಲಾಗಿದೆ. ಆದರೆ, ಎಷ್ಟೇ ಪ್ರಯತ್ನಪಟ್ಟರೂ ಶಿಕ್ಷಕನ ಜೀವ ಉಳಿಸಲು ಆಗಲಿಲ್ಲ.
ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ ಕೂಡ ಡೀಸೆಲ್ ಇಲ್ಲದ ಕಾರಣ ಆನ್ ಮಾಡಿರಲಿಲ್ಲ. ಸುಮಾರು 3 ಗಂಟೆಗೂ ಅಧಿಕ ಕಾಲ ವಿದ್ಯುತ್ ಪೂರೈಕೆ ಕಡಿತವಾಗಿ ಆಕ್ಸಿಜನ್ ಸ್ಥಗಿತವಾದ ಬಗ್ಗೆ ಸೋಂಕಿತರ ಸಂಬಂಧಿಕರು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಹೇಳಿದರೂ, ಅವರು ತಕ್ಷಣಕ್ಕೆ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.