ಬೆಂಗಳೂರು: ಆಹಾರ ಇಲಾಖೆ ವತಿಯಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳ ಪರಿಶೀಲನೆ ಕಾರ್ಯ ಆರಂಭಿಸಿದ್ದು, 1.31 ಲಕ್ಷ ಪಡಿತರ ಚೀಟಿಗಳು ಅನರ್ಹ ಎಂದು ಗುರುತಿಸಿದೆ. ಇಂತಹ ಕಾರ್ಡ್ ಗಳಿಗೆ ಮೇ ತಿಂಗಳಿನಿಂದ ಪಡಿತರ ವಿತರಣೆ ನಿಲ್ಲಿಸಲು ತೀರ್ಮಾನಿಸಲಾಗಿದೆ.
ರೇಷನ್ ಪಡೆಯುವ ಅರ್ಹರ ಪಟ್ಟಿಯಲ್ಲಿ ಮೃತಪಟ್ಟ 4.43 ಲಕ್ಷ ಫಲಾನುಭವಿಗಳು ಇರುವುದು ಕಂಡುಬಂದಿದೆ. ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಯೋಜನೆ ಅಡಿ ಕಾರ್ಡ್ ಪಡೆದುಕೊಂಡಿರುವ ಅನರ್ಹರನ್ನು ಗುರುತಿಸುವ ಕಾರ್ಯ ಮುಂದುವರೆದಿದೆ.
ಆದಾಯ ತೆರಿಗೆ ಪಾವತಿದಾರರು ಕೂಡ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು, ಆದಾಯ ತೆರಿಗೆ ಪಾವತಿಸುವ 5000 ಜನ ಅಂತ್ಯೋದಯ ಅನ್ನ ಯೋಜನೆ ಮತ್ತು 80 ಸಾವಿರ ಮಂದಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.
ನಿಗದಿಪಡಿಸಿದ ಮಾನದಂಡ ಉಲ್ಲಂಘಿಸಿ 1732 ಮಂದಿ ಅಂತ್ಯೋದಯ ಅನ್ನ ಯೋಜನೆ, 44 ಸಾವಿರ ಜನ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ಕಾರ್ಡ್ ಪಡೆದುಕೊಂಡವರ ಪತ್ತೆ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಅನರ್ಹರು ಪತ್ತೆಯಾಗಿದ್ದು, ಮೇ ತಿಂಗಳಿಂದ ರೇಷನ್ ಸ್ಥಗಿತಗೊಳಿಸುವ ಜೊತೆಗೆ ಆಹಾರ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.