ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ತಂದೆಯ ಶವವನ್ನ ಸಾಗಿಸಲೂ ಅಂಬುಲೆನ್ಸ್ ಸಿಗದ ಕಾರಣ ಪುತ್ರನೊಬ್ಬ ತನ್ನ ಕಾರಿಗೆ ಮೇಲ್ಪಾಗದಲ್ಲಿ ತಂದೆಯ ಶವವನ್ನ ಕಟ್ಟಿ ಸ್ಮಶಾನಕ್ಕೆ ತೆರಳಿದ ಘಟನೆ ಆಗ್ರಾದ ಮೋಕ್ಷಧಾಮ ಎಂಬಲ್ಲಿ ನಡೆದಿದೆ.
ಆಗ್ರಾದಲ್ಲೂ ಕೊರೊನಾ ಕೇಸ್ ಮಿತಿಮೀರಿದ್ದು ವೈದ್ಯಕೀಯ ಸೌಕರ್ಯಗಳಿಗೆ ಭಾರೀ ಅಭಾವ ಉಂಟಾಗ್ತಿದೆ. ಈ ನಡುವೆ ತಂದೆಯ ಶವ ಸಾಗಿಸಲು ಪುತ್ರ ಪಟ್ಟ ಪಾಡನ್ನ ಕಂಡ ಅನೇಕರ ಕಣ್ಣಲ್ಲಿ ನೀರು ಜಿನುಗಿದೆ.
ಆಗ್ರಾ ಪಟ್ಟಣದಲ್ಲಿ ಪ್ರತಿದಿನ 600ಕ್ಕೂ ಹೆಚ್ಚು ಕೇಸ್ಗಳು ವರದಿಯಾಗುತ್ತಿದೆ. ಕಳೆದ 9 ದಿನಗಳಲ್ಲಿ ಆಗ್ರಾದಲ್ಲಿ 35 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಆಂಬುಲೆನ್ಸ್ ಕೊರತೆಯಿಂದಾಗಿ ಕೊರೊನಾ ಸೋಂಕಿತರ ಶವವನ್ನ ಸಾಗಿಸಲು ಕುಟುಂಬಸ್ಥರು ಆರು ತಾಸುಗಳಿಗಿಂತಲೂ ಹೆಚ್ಚು ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸೋತು ಹೋಗಿದೆ. ಈ ಪಕ್ಷದ ಸೋಲು ಕಣ್ಮುಂದೆ ಬೆಳಕಿಗೆ ಬಂದಾಗಿದೆ. ಜನರಿಗೆ ಅಗತ್ಯವಾಗಿ ಬೇಕಾದ ಆಮ್ಲಜನಕ ಪೂರೈಕೆ, ವೆಂಟಿಲೇಟರ್, ಬೆಡ್ಗಳು, ಔಷಧಿ ಇವೆಲ್ಲವನ್ನ ಪೂರೈಸುವಲ್ಲಿ ಬಿಜೆಪಿ ಸರ್ಕಾರ ಎಡವಿದೆ. ಬಿಜೆಪಿ ಜನರಿಗೆ ಸುಳ್ಳು ಭರವಸೆಗಳನ್ನ ನೀಡುತ್ತಿದೆ ಎಂದು ಮೃತ ಸೋಂಕಿತನ ಪುತ್ರ ಆಕ್ರೋಶ ಹೊರಹಾಕಿದ್ರು.