ನವದೆಹಲಿ: ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ನ ಮೂರನೇ ಹಂತ ಮೇ 1 ರಿಂದ ಆರಂಭವಾಗಲಿದ್ದು, 18 ರಿಂದ 45 ವರ್ಷದೊಳಗಿನ ಫಲಾನುಭವಿಗಳು ಲಸಿಕೆ ಪಡೆಯಲು ಕೋವಿನ್ ಅಪ್ಲಿಕೇಶನ್ ನಲ್ಲಿ ನೋಂದಾಯಿಸಿಕೊಳ್ಳಬೇಕು.
18 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್ 28 ರಿಂದ ಕೋವಿನ್ ಫ್ಲಾಟ್ ಫಾರಂ ಮತ್ತು ಆರೋಗ್ಯ ಸೇತು ಆಪ್ ನಲ್ಲಿ ನೋಂದಣಿ ಆರಂಭವಾಗಲಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ನೋಂದಣಿ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಲಸಿಕೆ ನೀಡಿಕೆ ಕಾರ್ಯ ಮುಂದುವರೆದಿದೆ.
ಈ ಬಗ್ಗೆ ಮಾತನಾಡಿದ ಸರ್ಕಾರಿ ಅಧಿಕಾರಿಯೊಬ್ಬರು, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿಕೆ ಆರಂಭವಾಗಲಿದ್ದು, ಜನಸಂದಣಿ ನಿಯಂತ್ರಣ ಉದ್ದೇಶಕ್ಕಾಗಿ ಕೋವಿನ್ ಪೋರ್ಟಲ್ ನಲ್ಲಿ ನೊಂದಾಯಿಸುವುದು ಮತ್ತು ಲಸಿಕೆ ಪಡೆಯಲು ಅಪಾಯಿಂಟ್ಮೆಂಟ್ ಕಾಯ್ದಿರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. 18 ರಿಂದ 45 ವರ್ಷ ವಯಸ್ಸಿನವರು ಲಸಿಕೆ ಪಡೆಯಲು ಕೇಂದ್ರಗಳಲ್ಲಿ ಕಾಯ್ದಿರಿಸುವಿಕೆ ಕಡ್ಡಾಯವಾಗಿರುತ್ತದೆ. ಲಸಿಕೆ ಕೇಂದ್ರಗಳಲ್ಲಿ ಯಾವುದೇ ಅವ್ಯವಸ್ಥೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.