ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರ ಹಲವು ಜಿಲ್ಲೆಗಳಲ್ಲಿ ತಿಂಗಳಿಗೆ 5 ಕೆಜಿ ಅಕ್ಕಿ ಬದಲು 2 ಕೆಜಿ ನೀಡುತ್ತಿದೆ. ಮುಖ್ಯಮಂತ್ರಿಯವರೇ ಅನ್ಯಾಯ ತಕ್ಷಣ ಸರಿಪಡಿಸಿ ಬಡವರ ಶಾಪಕ್ಕೆ ಈಡಾಗಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಎಂದರೆ ಉರಿದುಕೊಳ್ಳುತ್ತಿದ್ದ, ಆ ಯೋಜನೆಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು ಈಗ ಪ್ರಧಾನಿಯವರು ಘೋಷಿಸಿರುವ ಎರಡು ತಿಂಗಳ ಕಾಲ ಐದು ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಕೊಂಡಾಡುತ್ತಿರುವುದು ತಮಾಷೆಯಾಗಿದೆ ಎಂದು ಟೀಕಿಸಿದ್ದಾರೆ.
ಕೊರೊನಾದಿಂದ ಸಂಕಷ್ಟಕ್ಕೀಡಾದ ಜನರಿಗೆ ಪ್ರತಿತಿಂಗಳು ಉಚಿತವಾಗಿ 10 ಕೆಜಿ ನೀಡಬೇಕೆಂದು ಆರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಪ್ರಧಾನಿಯವರೇ ಈಗಲಾದರೂ ಎಚ್ಚೆತ್ತುಕೊಳ್ಳಿ. ಕೊರೋನಾ ಕಷ್ಟ ಕೊನೆಯಾಗುವವರೆಗಾದರೂ 10 ಕೆಜಿ ಅಕ್ಕಿ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ.
ಕರ್ನಾಟಕವನ್ನು ಹಸಿವು ಮುಕ್ತ ಮಾಡುವ ಉದ್ದೇಶದಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮಾತೃಪೂರ್ಣ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಅದೆಲ್ಲವನ್ನು ಬಡವರ ವಿರೋಧಿ ಬಿಜೆಪಿ ಸರ್ಕಾರ ನಿಲ್ಲಿಸಲು ಹೊರಟಿದೆ. ಅವುಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು ಎಂದು ಹೇಳಿದ್ದಾರೆ.