ದಿನಕ್ಕೆ ಕನಿಷ್ಟ 300 ರೂಪಾಯಿಯನ್ನೂ ಗಳಿಸದ 19 ವರ್ಷದ ರದ್ದಿ ಆಯುವ ಯುವತಿ ತನಗೆ ಸಿಕ್ಕ ಪರ್ಸ್ ಹಾಗೂ ಮೊಬೈಲ್ನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸುವ ಮೂಲಕ ಮಾದರಿಯಾಗಿದ್ದಾಳೆ. ತಮಿಳುನಾಡಿನ ತಿರುನೆಲ್ವೇಲಿ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಮಾರ್ಟ್ ಫೋನ್ ಸೇರಿದಂತೆ ಪೊಲೀಸರು 58210 ರೂಪಾಯಿಗಳನ್ನ ಯುವತಿಯಿಂದ ಪಡೆದಿದ್ದಾರೆ.
ತಿರುನೆಲ್ವೇಲಿ ಜಿಲ್ಲೆಯ ಎಸ್ಪಿ ಎನ್. ಮಣಿವಣ್ಣನ್ ಎಂಬವರು ಗಣಪತಿ ಹಾಗೂ ಸೆಲ್ವಿ ಅವರ ಐವರು ಹೆಣ್ಣು ಮಕ್ಕಳಲ್ಲಿ ಕೊನೆಯವಳಾದ ಮಾರಿಯಮ್ಮಳ್ ಳನ್ನ ಶುಕ್ರವಾರ ಸನ್ಮಾನಿಸಿದ್ರು. ಈ ಕುಟುಂಬವು ಬುಡಕಟ್ಟು ಜನಾಂಗಕ್ಕೆ ಸೇರಿದ್ದು ತಮಿಳುನಾಡಿನ ಬೀದಿಗಳಲ್ಲಿ ಭಿಕ್ಷಾಟನೆ ಇಲ್ಲವೇ ಸಣ್ಣ ಪುಟ್ಟ ಸಾಮಗ್ರಿಗಳನ್ನ ಮಾರಾಟ ಮಾಡಿ ಜೀವನ ಸಾಗಿಸುತ್ತಿದೆ. ನಾಲ್ವರು ಸಹೋದರಿಯರಿಗೆ ವಿವಾಹವಾಗಿದ್ದು ಮಾರಿಯಮ್ಮಳ್ ಮಾತ್ರ ತನ್ನ ಪೋಷಕರ ಜೊತೆ ಇದ್ದಾಳೆ. ಈಕೆ ಸಹ ತನ್ನ ಸಮುದಾಯದ ಇತರರಂತೆ ಐದನೇ ತರಗತಿ ಬಳಿಕ ಶಿಕ್ಷಣ ಮುಂದುವರಿಸಿಲ್ಲ.
ತನ್ನ ಅತ್ತೆ ಸೇರಿದಂತೆ ಇನ್ನೂ ಆರು ಮಂದಿ ಜೊತೆ ಸೇರಿ ರದ್ಧಿ ಆಯುತ್ತಿದ್ದ ವೇಳೆಯಲ್ಲಿ ಮಾರಿಯಮ್ಮಳ್ಗೆ ಈ ಪರ್ಸ್ ಸಿಕ್ಕಿದೆ. ಈ ಪರ್ಸ್ ವೈಬ್ರೇಟ್ ಆಗಿದ್ದನ್ನ ನೋಡಿ ತೆರೆದ್ರು ನೋಡಿದ್ರೆ ಅದರಲ್ಲಿ ಹಣ ಹಾಗೂ ಸ್ಮಾರ್ಟ್ ಫೋನ್ ಇರುವ ವಿಚಾರ ತಿಳಿದಿದೆ.
ಕೂಡಲೇ ಸೆಲ್ವಿ ತಮ್ಮ ಮಗಳ ಸಮೇತ ಪೊಲೀಸ್ ಠಾಣೆಗೆ ತೆರಳಿ ಈ ಪರ್ಸ್ನ್ನು ಜೋಪಾನವಾಗಿ ಠಾಣೆಗೆ ಒಪ್ಪಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸೆಲ್ವಿ, ಹಣ ಗಳಿಸುವ ಕಷ್ಟ ಏನೆಂದು ನಮಗೆ ತಿಳಿದಿದೆ. ಹೀಗಾಗಿ ಹಣದ ಸಮೇತ ಪರ್ಸ್ನ್ನು ಪೊಲೀಸರ ಕೈಗೆ ನೀಡಿದ್ದೇವೆ ಎಂದು ಹೇಳಿದ್ರು. ಪರ್ಸ್ ಮಾಲೀಕರು ಈ ಕುಟುಂಬಕ್ಕೆ 1 ಸಾವಿರ ರೂಪಾಯಿಯನ್ನ ಬಹುಮಾನದ ರೂಪದಲ್ಲಿ ನೀಡಿದ್ದಾರೆ.